ಕಾರವಾರ: ಯಕ್ಷಗಾನ ಹಾಗೂ ಹಿಂದೂಸ್ತಾನಿ ಸಂಗೀತ ಕ್ಷೇತ್ರದ ಹಿರಿಯ ಸಾಧಕರಾದ ಶ್ರೀಪಾದ ಭಟ್ ಥಂಡಿಮನೆ ಮತ್ತು ಪಂ. ನಾಗಭೂಷಣ ಹೆಗಡೆ ಬಾಳೆಹದ್ದ ಅವರ ನಿಧನಕ್ಕೆ ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಶ್ರದ್ಧಾಂಜಲಿ ಸಲ್ಲಿಸಿರುವ ಸಂಸದರು, ಉತ್ತರ ಕನ್ನಡದ ಸಾಂಸ್ಕೃತಿಕ ಲೋಕ ಇಬ್ಬರು ಮೇರು ಸಾಧಕರನ್ನು ಕಳೆದುಕೊಂಡಿದೆ ಎಂದು ವಿಷಾದಿಸಿದ್ದಾರೆ.
ಬಡಗುತಿಟ್ಟಿನ ದಿಗ್ಗಜ ಯಕ್ಷಗಾನ ಕಲಾವಿದ ಶ್ರೀಪಾದ ಭಟ್ ಥಂಡಿಮನೆ ಅವರು ತಮ್ಮ ಗಂಭೀರ ಕಂಠ, ಸ್ಪಷ್ಟ ವಾಕ್ಸರಣಿ ಹಾಗೂ ಸಾತ್ವಿಕ ಮತ್ತು ಪ್ರೌಢ ಪಾತ್ರಪೋಷಣೆಯ ಮೂಲಕ ರಂಗಸ್ಥಳಕ್ಕೆ ವಿಶೇಷ ಮೆರುಗು ನೀಡಿದ್ದರು. ಅವರ ಕಲಾಭಿವ್ಯಕ್ತಿ ಯಕ್ಷಗಾನ ರಂಗದಲ್ಲಿ ವಿಶಿಷ್ಟ ಛಾಪು ಮೂಡಿಸಿತ್ತು ಎಂದು ಸ್ಮರಿಸಿದ್ದಾರೆ.
ಹಿರಿಯ ಹಿಂದೂಸ್ತಾನಿ ಸಂಗೀತ ಸಾಧಕ ಪಂಡಿತ್ ನಾಗಭೂಷಣ ಹೆಗಡೆ ಬಾಳೆಹದ್ದ ಅವರು ದಶಕಗಳ ಕಾಲ ಸಂಗೀತ ಸಾಧನೆಯಲ್ಲಿ ತೊಡಗಿಸಿಕೊಂಡು, ನೂರಾರು ಶಿಷ್ಯರಿಗೆ ವಿದ್ಯಾದಾನ ಮಾಡಿದ್ದಾರೆ. ಅವರ ನಾದೋಪಾಸನೆ ಮತ್ತು ಸಂಗೀತ ಸೇವೆ ಕಲಾಲೋಕಕ್ಕೆ ಮಹತ್ವದ ಕೊಡುಗೆಯಾಗಿದೆ ಎಂದು ಕಾಗೇರಿ ತಿಳಿಸಿದ್ದಾರೆ.
ಇಬ್ಬರೂ ಹಿರಿಯ ಸಾಧಕರು ತಮ್ಮ ಕಲಾಪ್ರೌಢಿಮೆ, ಶಿಸ್ತು ಹಾಗೂ ಜೀವಿತಾವಧಿಯ ಸಾಧನೆಯ ಮೂಲಕ ಉಳಿಸಿಹೋಗಿರುವ ಮೌಲ್ಯಗಳು ಸದಾ ಚಿರಸ್ಮರಣೀಯವಾಗಿರಲಿವೆ. ಅವರ ಅಗಲಿಕೆ ಕಲಾಜಗತ್ತಿಗೆ ತುಂಬಲಾರದ ನಷ್ಟವಾಗಿದೆ ಎಂದು ಸಂತಾಪ ಸೂಚಿಸಿದ್ದಾರೆ.
ದಿವಂಗತರಿಗೆ ಭಗವಂತ ಸದ್ಗತಿ ಕರುಣಿಸಲಿ. ಅವರ ಕುಟುಂಬದವರು, ಶಿಷ್ಯವೃಂದ ಹಾಗೂ ಕಲಾಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿ ದೊರೆಯಲಿ ಎಂದು ಪ್ರಾರ್ಥಿಸಿದ್ದಾರೆ.