ಶಿರಸಿ: ಅತಿಕ್ರಮಣದಾರರು ಆತಂಕಪಡುವ ಅಗತ್ಯವಿಲ್ಲ. ನಿಮ್ಮ ಹೋರಾಟದಲ್ಲಿ ನಾನು ನಿಮ್ಮೊಂದಿಗಿದ್ದೇನೆ. ಯಾವುದೇ ಕಾರಣಕ್ಕೂ ಜನರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಭರವಸೆ ನೀಡಿದರು.
ಶಿರಸಿ ತಾಲೂಕಿನ ಇಸಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ ಬೃಹತ್ ಜನಾಂದೋಲನ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ಅರಣ್ಯ ಹಾಗೂ ಇತರ ಸರ್ಕಾರಿ ಭೂಮಿಯಲ್ಲಿ ಹಲವು ವರ್ಷಗಳಿಂದ ಮನೆ ನಿರ್ಮಿಸಿಕೊಂಡು ವಾಸಿಸುತ್ತಿರುವ ಕುಟುಂಬಗಳ ಮನೆ ಸಂಖ್ಯೆ ಮತ್ತು ತೆರಿಗೆ ದಾಖಲೆಗಳನ್ನು ಇ-ಸ್ವತ್ತು ತಂತ್ರಾಂಶದಿಂದ ಕೈಬಿಡುವ ಆತಂಕಕ್ಕೆ ಕಾರಣವಾಗಿರುವ ಹೊಸ ಮಾರ್ಗಸೂಚಿಯ ಕುರಿತು ಮಾತನಾಡಿದರು.
ಸಂಬಂಧಪಟ್ಟ ಸರ್ಕಾರ ಮತ್ತು ಅಧಿಕಾರಿಗಳು ಈ ಗಂಭೀರ ವಿಷಯದಲ್ಲಿ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಮೇಲಿನ ಹಂತದಲ್ಲಿ ಪ್ರತಿಭಟನೆ ನಡೆಸಿ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಕಾಗೇರಿ ಹೇಳಿದರು.
ಇಸಳೂರು ಗ್ರಾಮ ಪಂಚಾಯಿತಿಯಿಂದ ಮಾಹಿತಿ ಪಡೆದ ಅವರು, ಹೊಸ ಇ-ಸ್ವತ್ತು ಮಾರ್ಗಸೂಚಿಯಿಂದ ಕೇವಲ ಇಸಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೇ ಸುಮಾರು 1,600ಕ್ಕೂ ಹೆಚ್ಚು ಮನೆ ಸಂಖ್ಯೆಗಳು ಸಮಸ್ಯೆಗೆ ಒಳಗಾಗುವ ಆತಂಕವಿದೆ ಎಂಬುದನ್ನು ಗಂಭೀರವಾಗಿ ಪರಿಗಣಿಸಿದರು.
ಹಲವು ದಶಕಗಳಿಂದ ಗ್ರಾಮ ಪಂಚಾಯಿತಿಯೇ ಮನೆ ಸಂಖ್ಯೆ ನೀಡಿ ತೆರಿಗೆ ಸಂಗ್ರಹಿಸುತ್ತಾ ಬಂದಿದೆ. ಈಗ ಅದೇ ಮನೆಗಳ ದಾಖಲೆಗಳನ್ನು ಇ-ಸ್ವತ್ತು ತಂತ್ರಾಂಶದಿಂದ ಕೈಬಿಟ್ಟರೆ ಬಡ ಕುಟುಂಬಗಳ ವಿಳಾಸ, ಮೂಲಸೌಕರ್ಯ ಹಾಗೂ ಆಡಳಿತಾತ್ಮಕ ಅಸ್ತಿತ್ವಕ್ಕೆ ಸಮಸ್ಯೆಯಾಗಲಿದೆ ಎಂದು ಪ್ರತಿಭಟನಾಕಾರರು ಆಕ್ಷೇಪ ವ್ಯಕ್ತಪಡಿಸಿದರು.
ಇ-ಸ್ವತ್ತು ಮಾರ್ಗಸೂಚಿ ಹಿಂಪಡೆಯಬೇಕು ಹಾಗೂ ಹಳೆಯ ಮನೆ ಸಂಖ್ಯೆ ಮತ್ತು ಪಂಚಾಯಿತಿ ದಾಖಲೆಗಳನ್ನು ಮುಂದುವರಿಸಬೇಕು ಎಂದು ಒತ್ತಾಯಿಸಿ ನಡೆದ ಪ್ರತಿಭಟನಾ ಸಭೆಯಲ್ಲಿ, ಈ ಕುರಿತು ರಾಜ್ಯಪಾಲರಿಗೆ ಸಲ್ಲಿಸಲು 900ಕ್ಕೂ ಹೆಚ್ಚು ವೈಯಕ್ತಿಕ ಮನವಿ ಅರ್ಜಿಗಳನ್ನು ಸಂಗ್ರಹಿಸಲಾಯಿತು.
ಹೋರಾಟ ಸಮಿತಿಯ ನವೀನ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭೆಯಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ವಿವಿಧ ಬಿಜೆಪಿ ಪದಾಧಿಕಾರಿಗಳು, ಊರಿನ ಹಿರಿಯರು, ವಿವಿಧ ಸಂಘಟನೆಗಳ ಮುಖಂಡರು, ಮಾರ್ಗಸೂಚಿಯಿಂದ ಬಾಧಿತರಾಗುವ ಕುಟುಂಬಗಳು ಸೇರಿದಂತೆ ಹೆಚ್ಚಿನ ಸಂಖ್ಯೆಯ ನಾಗರಿಕರು ಉಪಸ್ಥಿತರಿದ್ದರು.


