ಕಾರವಾರ: ಕೈಗಾ ಅಣು ವಿದ್ಯುತ್ ಸ್ಥಾವರದ 5 ಮತ್ತು 6ನೇ ಘಟಕಗಳ ನಿರ್ಮಾಣ ಕಾರ್ಯದಲ್ಲಿ ಮಹತ್ವದ ಮೈಲಿಗಲ್ಲೊಂದು ಸ್ಥಾಪನೆಯಾಗಿದೆ. ಭಾರತೀಯ ಪರಮಾಣು ವಿದ್ಯುತ್ ನಿಗಮ (NPCIL) ಇತಿಹಾಸದಲ್ಲೇ ಅತಿದೊಡ್ಡ ಏಕಶಿಲಾ (Monolithic) ಕಾಂಕ್ರೀಟ್ ಸುರಿಯುವ ಕಾರ್ಯವನ್ನು ಮೇಘಾ ಇಂಜಿನಿಯರಿಂಗ್ ಅಂಡ್ ಇನ್‌ಫ್ರಾಸ್ಟ್ರಕ್ಚರ್ಸ್ ಲಿಮಿಟೆಡ್ (MEIL) ಯಶಸ್ವಿಯಾಗಿ ಪೂರ್ಣಗೊಳಿಸಿದೆ.
ಪರಮಾಣು ವಲಯದಲ್ಲಿ ಎಂಇಐಎಲ್ ಕೈಗೊಂಡಿರುವ ಮೊದಲ ಯೋಜನೆಯೇ ಇದಾಗಿದ್ದು, ಆರಂಭದಲ್ಲೇ ಅತ್ಯಂತ ಸಂಕೀರ್ಣ ಮತ್ತು ಬೃಹತ್ ನಿರ್ಮಾಣ ಹಂತವನ್ನು ಯಶಸ್ವಿಯಾಗಿ ಮುಗಿಸಿರುವುದು ಸಂಸ್ಥೆಯ ತಾಂತ್ರಿಕ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ.
ಯೋಜನೆಯಡಿ ಸುಮಾರು 7,250 ಘನ ಮೀಟರ್ ಕಾಂಕ್ರೀಟ್ ಅನ್ನು ನಿರಂತರವಾಗಿ ಸುರಿಯಲಾಗಿದೆ. ಪ್ರತಿ ಘನ ಮೀಟರ್‌ಗೆ 360 ಕೆ.ಜಿ. ಕಬ್ಬಿಣದ ಸರಳುಗಳ ಸಾಂದ್ರತೆಯೊಂದಿಗೆ ಈ ಕಾಮಗಾರಿ ನೆರವೇರಿಸಲಾಗಿದೆ.
ಇಷ್ಟೊಂದು ದೊಡ್ಡ ಪ್ರಮಾಣದ ಕಾಂಕ್ರೀಟ್ ಕಾಮಗಾರಿಯನ್ನು ಯಾವುದೇ ವ್ಯತ್ಯಯವಿಲ್ಲದೆ ಪೂರ್ಣಗೊಳಿಸಲು ಎಂಇಐಎಲ್ ವಿಶೇಷ ಮೂಲಸೌಕರ್ಯವನ್ನು ನಿರ್ಮಿಸಿತ್ತು. ಗಂಟೆಗೆ 360 ಘನ ಮೀಟರ್ ಸಾಮರ್ಥ್ಯದ ತಾಪಮಾನ ನಿಯಂತ್ರಿತ ಕಾಂಕ್ರೀಟ್ ಘಟಕ, 340 ಘನ ಮೀಟರ್ ಸಾಮರ್ಥ್ಯದ ಕಾಂಕ್ರೀಟ್ ಪಂಪ್‌ಗಳು, ದಿನಕ್ಕೆ 510 ಟನ್ ಸಾಮರ್ಥ್ಯದ ಐಸ್ ಉತ್ಪಾದನಾ ಘಟಕ, 400 ಮೆಟ್ರಿಕ್ ಟನ್ ಐಸ್ ಸಂಗ್ರಹ ವ್ಯವಸ್ಥೆ ಹಾಗೂ 2,600 ಮೆಟ್ರಿಕ್ ಟನ್ ಸಾಮರ್ಥ್ಯದ ಸಿಮೆಂಟ್ ಮತ್ತು ಫ್ಲೈಆ್ಯಶ್ ಸಂಗ್ರಹಣಾ ವ್ಯವಸ್ಥೆ ಈ ಕಾಮಗಾರಿಗೆ ಬೆಂಬಲ ನೀಡಿದವು.
ಕಾಂಕ್ರೀಟ್‌ನ ಗುಣಮಟ್ಟ ಕಾಪಾಡುವ ಉದ್ದೇಶದಿಂದ ಅದರ ತಾಪಮಾನವನ್ನು 19 ಡಿಗ್ರಿ ಸೆಲ್ಸಿಯಸ್ನಲ್ಲಿ ನಿರಂತರವಾಗಿ ಕಾಯ್ದುಕೊಳ್ಳಲಾಗಿತ್ತು.
ಭಾರಿ ಮಳೆ ಹಾಗೂ ದಟ್ಟ ಅರಣ್ಯ ಪ್ರದೇಶವಾಗಿರುವ ಕೈಗಾದಲ್ಲಿ ಕಾಮಗಾರಿ ನಿರಂತರವಾಗಿ ಸಾಗಲು 75 ಮೀಟರ್ ವ್ಯಾಸದ ರೈನ್ ಪ್ರೊಟೆಕ್ಷನ್ ಸಿಸ್ಟಮ್ ಅಳವಡಿಸಲಾಗಿತ್ತು. ಇದರಿಂದ ಪ್ರತಿಕೂಲ ಹವಾಮಾನದಲ್ಲಿಯೂ ನಿರ್ಮಾಣ ಕಾರ್ಯಕ್ಕೆ ಅಡ್ಡಿಯಾಗದೆ, ಕಾರ್ಮಿಕರ ಸುರಕ್ಷತೆ ಮತ್ತು ಕಾಂಕ್ರೀಟ್ ಗುಣಮಟ್ಟ ಎರಡನ್ನೂ ಕಾಪಾಡಲು ಸಾಧ್ಯವಾಯಿತು.
ಈ ಬೃಹತ್ ಕಾರ್ಯಾಚರಣೆಯಲ್ಲಿ ನೂರಾರು ಇಂಜಿನಿಯರ್‌ಗಳು, ತಂತ್ರಜ್ಞರು, ಮೇಲ್ವಿಚಾರಕರು, ಗುಣಮಟ್ಟ ನಿಯಂತ್ರಣ ತಜ್ಞರು ಹಾಗೂ ನುರಿತ ಕಾರ್ಮಿಕರು ಹಗಲಿರುಳು ಶಿಫ್ಟ್‌ಗಳಲ್ಲಿ ಕಾರ್ಯನಿರ್ವಹಿಸಿದರು. ಪರಮಾಣು ಕ್ಷೇತ್ರಕ್ಕೆ ಅನ್ವಯಿಸುವ ಕಟ್ಟುನಿಟ್ಟಿನ ಗುಣಮಟ್ಟದ (QA/QC) ಮಾನದಂಡಗಳನ್ನು ಪ್ರತಿಯೊಂದು ಹಂತದಲ್ಲೂ ಪಾಲಿಸಲಾಗಿದ್ದು, ರಚನೆಯ ಸುರಕ್ಷತೆ ಮತ್ತು ದೀರ್ಘಾವಧಿಯ ಕಾರ್ಯಕ್ಷಮತೆಯನ್ನು ಖಚಿತಪಡಿಸಲಾಗಿದೆ.
ಕೈಗಾ 5 ಮತ್ತು 6ನೇ ಘಟಕಗಳ ನಿರ್ಮಾಣದಲ್ಲಿ ಈ ಸಾಧನೆ ಮಹತ್ವದ ಹಂತವೆಂದು ಪರಿಗಣಿಸಲಾಗಿದ್ದು, ಭಾರತದ ಪರಮಾಣು ವಿದ್ಯುತ್ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಗಮನಾರ್ಹ ಮೈಲಿಗಲ್ಲಾಗಿ ಗುರುತಿಸಲಾಗಿದೆ.