ಬೆಂಗಳೂರು: ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಪ್ರಧಾನಿಯಾದ H. D. Deve Gowda ಅವರು 92ರ ಇಳಿವಯಸ್ಸಿನಲ್ಲೂ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಅವರ ಸಂಚಾರ ಹಾಗೂ ಭದ್ರತೆಯನ್ನು ಗಮನದಲ್ಲಿಟ್ಟು, ರಾಜ್ಯ ಸರ್ಕಾರವು ಹೊಸ ವಾಹನ ಖರೀದಿಸಲು ಅನುಮೋದನೆ ನೀಡಿದೆ.
ಸರ್ಕಾರವು ಐಷಾರಾಮಿ ಹಾಗೂ ಗರಿಷ್ಠ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿರುವ Volvo XC90 ಕಾರನ್ನು ಖರೀದಿಸಲು ಒಪ್ಪಿಗೆ ಸೂಚಿಸಿದೆ. ಈ ವಾಹನದ ಒಟ್ಟು ವೆಚ್ಚ ₹1,25,65,388 (ಸುಮಾರು 1.25 ಕೋಟಿ ರೂಪಾಯಿ) ಆಗಿದೆ.
ಈ ಸಂಬಂಧ ಅಧಿಸೂಚನೆಯನ್ನು ಹೊರಡಿಸಿರುವ ಸರ್ಕಾರ, ಮೆ: Martial Motors Pvt. Ltd., ಬೆಂಗಳೂರು ಇವರಿಂದ ನೇರ ಖರೀದಿಗೆ ಅನುಮತಿ ನೀಡಿದೆ. “ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ-1999”ರ ಕಲಂ 4(ಜಿ) ಅಡಿಯಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ವಿನಾಯಿತಿ ನೀಡಲಾಗಿದೆ.
ಉತ್ತಮ ಗುಣಮಟ್ಟದ ಸೇವೆಯನ್ನು ಸಮಂಜಸ ದರದಲ್ಲಿ ಪಡೆಯುವಂತೆ ಇಲಾಖೆಗೆ ಸೂಚಿಸಲಾಗಿದೆ.
ಈ ಕಾರಿನಲ್ಲಿ ಲೆವೆಲ್-2 ADAS (Advanced Driver Assistance Systems), 360 ಡಿಗ್ರಿ ಕ್ಯಾಮೆರಾ, ABS, EBD, ಹಿಲ್ ಸ್ಟಾರ್ಟ್ ಮತ್ತು ಹಿಲ್ ಡಿಸೆಂಟ್ ಕಂಟ್ರೋಲ್, ಪಾರ್ಕಿಂಗ್ ಅಸಿಸ್ಟ್ ಸೇರಿದಂತೆ ಹಲವು ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳಿವೆ. ಜೊತೆಗೆ, ಪ್ರಯಾಣವನ್ನು ಇನ್ನಷ್ಟು ಸುಲಭ ಮತ್ತು ಆರಾಮದಾಯಕವಾಗಿಸಲು ಅಗತ್ಯವಾದ ಮಾಡಿಫಿಕೇಶನ್ಗಳನ್ನು ಮಾಡುವ ಸಾಧ್ಯತೆಯೂ ಇದೆ.
ವಿಶೇಷವಾಗಿ, ದೇವೇಗೌಡರ ವಯಸ್ಸನ್ನು ಗಮನದಲ್ಲಿಟ್ಟು ಕಾರಿನಲ್ಲಿ ಹತ್ತಿ-ಇಳಿಯಲು ಮತ್ತು ಕುಳಿತುಕೊಳ್ಳಲು ಅನುಕೂಲವಾಗುವ ಬದಲಾವಣೆಗಳನ್ನು ಮಾಡುವ ಸಾಧ್ಯತೆಗಳಿವೆ.