ಕಾರವಾರ: ಯುವಜನತೆ ಹಾಗೂ ದೇಶದ ಭವಿಷ್ಯವನ್ನು ಹಾಳುಮಾಡುವ ಮಾದಕ ದ್ರವ್ಯಗಳ ವಿರುದ್ಧ ಜಾಗೃತಿ ಮೂಡಿಸುವುದು ಮತ್ತು ಅವುಗಳ ವಿರುದ್ಧ ಹೋರಾಡುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ದಿಲೀಷ್ ಶಶಿ ಹೇಳಿದರು.
ನಗರದ ರವೀಂದ್ರನಾಥ ಠಾಗೋರ್ ಕಡಲತೀರದ ಮಯೂರ ವರ್ಮಾ ವೇದಿಕೆಯಲ್ಲಿ ಸೋಮವಾರ ಕಾರವಾರಕ್ಕೆ ಆಗಮಿಸಿದ ಮಾದಕ ದ್ರವ್ಯ ವಿರೋಧಿ ರಾಷ್ಟ್ರೀಯ ಬೈಕ್ ರ್ಯಾಲಿ ತಂಡಗಳನ್ನು ಸ್ವಾಗತಿಸಿ, ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಒನ್ ನೇಷನ್, ಒನ್ ರೈಡ್, ಡ್ರಗ್ಸ್ ಫ್ರೀ ಇಂಡಿಯಾ’ ಅಭಿಯಾನದಡಿ ಕೇರಳ, ಲಕ್ಷದ್ವೀಪ, ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಂದ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ. ಶಾಲಾ-ಕಾಲೇಜುಗಳು ಮತ್ತು ಕಚೇರಿಗಳಲ್ಲಿ ಕಾರ್ಯಕ್ರಮಗಳ ಮೂಲಕ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಕೆಎಸ್‌ಆರ್‌ಪಿ ಡೆಪ್ಯೂಟಿ ಕಮಾಂಡೆಂಟ್ ಚಂದ್ರಶೇಖರ್ ಮಾತನಾಡಿ, 2030ರೊಳಗೆ ಡ್ರಗ್ಸ್ ಮುಕ್ತ ಭಾರತ ನಿರ್ಮಿಸುವ ಗುರಿ ಹೊಂದಲಾಗಿದೆ. ಇತ್ತೀಚಿನ ದಿನಗಳಲ್ಲಿ ಮಾದಕ ವಸ್ತುಗಳ ಹಾವಳಿ ಆತಂಕಕಾರಿಯಾಗಿ ಬೆಳೆಯುತ್ತಿದ್ದು, ವಿದ್ಯಾರ್ಥಿಗಳು, ಯುವಜನರು ಹಾಗೂ ಗೃಹಿಣಿಯರೂ ಇದರ ದುಷ್ಪರಿಣಾಮಕ್ಕೆ ಒಳಗಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದರು.
ಮಾದಕ ವಸ್ತುಗಳನ್ನು ಸೇವಿಸುವಂತೆ ಯಾರಾದರೂ ಒತ್ತಾಯಿಸಿದರೆ ದೃಢವಾಗಿ ನಿರಾಕರಿಸಬೇಕು. ಶಾಲಾ-ಕಾಲೇಜುಗಳು ಅಥವಾ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇವುಗಳ ಮಾರಾಟ ಮತ್ತು ಪೂರೈಕೆ ಕಂಡುಬಂದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು. ಸಾರ್ವಜನಿಕರ ಸಹಕಾರದಿಂದ ಅನೇಕ ಕುಟುಂಬಗಳನ್ನು ವ್ಯಸನದ ದುಷ್ಪರಿಣಾಮಗಳಿಂದ ರಕ್ಷಿಸಬಹುದು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿಲೀಪ್ ಎಂ.ಎನ್. ಮಾತನಾಡಿ, ಸಮಾಜಕ್ಕೆ ಡ್ರಗ್ಸ್ ಕ್ಯಾನ್ಸರ್ ಇದ್ದಂತೆ. ಕುತೂಹಲಕ್ಕಾಗಿ ಒಮ್ಮೆಯಾದರೂ ಮಾದಕ ವಸ್ತುಗಳನ್ನು ಪ್ರಯೋಗಿಸಿ ನೋಡಬೇಕೆಂಬ ಮನೋಭಾವ ಯುವಜನರನ್ನು ವ್ಯಸನದ ಸುಳಿಗೆ ತಳ್ಳಬಹುದು. ವ್ಯಸನವು ಸ್ವಯಂ ನಿಯಂತ್ರಣ, ಮಾನಸಿಕ ಆರೋಗ್ಯ, ಕುಟುಂಬ ಜೀವನ, ಸ್ನೇಹ ಸಂಬಂಧ ಹಾಗೂ ಶೈಕ್ಷಣಿಕ ಭವಿಷ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದರು.
ಮಾದಕ ವಸ್ತುಗಳ ಬಳಕೆಯನ್ನು ತಡೆಯಲು ರಾಜ್ಯದಲ್ಲಿ ಗೃಹ ಸಚಿವರ ನೇತೃತ್ವದಲ್ಲಿ ‘ಬೇಡ ಬ್ರೋ’ ಅಭಿಯಾನ ಆರಂಭಿಸಲಾಗಿದೆ. ಡ್ರಗ್ಸ್ ಮುಕ್ತ ಕರ್ನಾಟಕ ಹಾಗೂ ಮಾದಕ ವಸ್ತುಗಳಿಂದ ಮುಕ್ತ ಭಾರತ ನಿರ್ಮಿಸುವ ಉದ್ದೇಶದಿಂದ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ, ಬೈಕ್ ರೈಡರ್‌ಗಳು, ಪೊಲೀಸ್ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


