Friday, March 13, 2026
HomeLocal Newsಡಾಕ್ಟರ್‌ಗಳೇ ಇಲ್ಲದಿದ್ದರೆ ಔಷಧ ಇಟ್ಟು ಏನು ಪ್ರಯೋಜನ?!

ಡಾಕ್ಟರ್‌ಗಳೇ ಇಲ್ಲದಿದ್ದರೆ ಔಷಧ ಇಟ್ಟು ಏನು ಪ್ರಯೋಜನ?!

ಕಾಂಗ್ರೆಸ್‌ ಮುಖಂಡರ ನಡುವೆಯೇ ಮೋಡ ಕವಿದ ವಾತಾವರಣ!

ಕಾರವಾರ: ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಕೆಡಿಪಿ ಸಭೆ ವಾಗ್ವಾದದ ಹಿನ್ನೆಲೆಯಲ್ಲಿ ಉದ್ವಿಗ್ನತೆಯ ವಾತಾವರಣಕ್ಕೀಡಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹಾಗೂ ಕಾರವಾರ ಶಾಸಕ ಸತೀಶ್ ನಡುವೆ ತೀವ್ರ ಮಾತಿನ ಚಕಮಕಿ ನಡೆದು, ಸೈಲ್ ಸಭೆಯಿಂದ ಹೊರನಡೆದ ಘಟನೆ ನಡೆದಿದೆ. ಇಬ್ಬರೂ ಆಡಳಿತಾರೂಢ ಕಾಂಗ್ರೆಸ್ ಪಕ್ಷದವರೇ!

ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಔಷಧಗಳ ಕೊರತೆ ಕುರಿತು ಚರ್ಚೆ ನಡೆಯುತ್ತಿದ್ದ ವೇಳೆ ಶಾಸಕ ಸೈಲ್ ಹಲವು ಆಸ್ಪತ್ರೆಗಳಲ್ಲಿ ಔಷಧಗಳ ಅಭಾವವಿದೆ ಎಂದು ವಿಷಯವನ್ನು ಪ್ರಸ್ತಾಪಿಸಿ ತಕ್ಷಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಈ ವೇಳೆ ಸಚಿವ ವೈದ್ಯ ಪ್ರತಿಕ್ರಿಯೆ ನೀಡುತ್ತ, “ಡಾಕ್ಟರ್‌ಗಳೇ ಇಲ್ಲದಿದ್ದರೆ ಔಷಧ ಇಟ್ಟು ಏನು ಪ್ರಯೋಜನ?” ಎಂದು ಪ್ರಶ್ನಿಸಿದರೆಂಬ ಮಾಹಿತಿ ಲಭ್ಯವಾಗಿದೆ. ಸಚಿವರ ಮಾತಿಗೆ ಪ್ರತಿಯಾಗಿ ಸೈಲ್, “ಡಾಕ್ಟರ್ ನೇಮಕ ಮಾಡುವ ಜವಾಬ್ದಾರಿ ನನ್ನದೇ?” ಎಂದು ಪ್ರಶ್ನಿಸಿದರು. ಬಳಿಕ ಸಚಿವರು “ಶಾಂತವಾಗಿ ಕೂತು ಸಭೆಯಲ್ಲಿ ಪಾಲ್ಗೊಳ್ಳಿ. ಅನಗತ್ಯವಾಗಿ ಮಾತನಾಡಬೇಡಿ. ಆಗದಿದ್ದರೆ ನಾನು ನೋಡಿಕೊಳ್ಳುತ್ತೇನೆ” ಎಂದು ಹೇಳಿದರೆಂದು ತಿಳಿದುಬಂದಿದೆ.

ಇದರಿಂದ ಆಕ್ರೋಶಗೊಂಡ ಸೈಲ್, “ನಾನು ಹೆಬ್ಬೆಟ್ಟು ಅಲ್ಲ!” ಎಂದು ಉಚ್ಛಸ್ವರದಲ್ಲಿ ಹೇಳಿ ಸಭಾಂಗಣ ತೊರೆದು ಹೊರನಡೆದರು. ಈ ವೇಳೆ ಸಭೆಯಲ್ಲಿ ಇದ್ದ ಶಾಸಕ ಭೀಮಣ್ಣ ನಾಯ್ಕ ಸೇರಿದಂತೆ ಯಾರೂ ಅವರನ್ನು ತಡೆಯಲು ಮುಂದಾಗಲಿಲ್ಲ ಎಂದು ವರದಿಯಾಗಿದೆ.

ಆಡಳಿತಾರೂಢ ಪಕ್ಷದ ಇಬ್ಬರು ಪ್ರಮುಖ ಜನಪ್ರತಿನಿಧಿಗಳ ಮಧ್ಯೆ ನಡೆದ ಈ ಬಹಿರಂಗ ವಾಗ್ವಾದದಿಂದ ಸಭೆಯಲ್ಲಿ ಉಪಸ್ಥಿತರಿದ್ದ ಅಧಿಕಾರಿಗಳು ಗೊಂದಲಕ್ಕೀಡಾದರು. ಸಭೆಯಿಂದ ಹೊರಬರುತ್ತಿದ್ದ ವೇಳೆ ಸೈಲ್ ಅಸಮಾಧಾನ ವ್ಯಕ್ತಪಡಿಸುತ್ತ, “ಕೆಲವರಿಗೆ ನಾವು ಈ ಸಭೆಗೆ ಬರುವುದೇ ಇಷ್ಟವಿಲ್ಲ. ನೇರವಾಗಿ ಬರಬೇಡಿ ಎಂದರೆ ಬರಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರೆಂದು ತಿಳಿದುಬಂದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share