Friday, July 24, 2026
Join WhatsApp Group
HomeCrimeಡಿಜಿಟಲ್ ಅರೆಸ್ಟ್ ಬಲೆಗೆ ಬಿದ್ದ ಮಹಿಳೆ

ಡಿಜಿಟಲ್ ಅರೆಸ್ಟ್ ಬಲೆಗೆ ಬಿದ್ದ ಮಹಿಳೆ

ಮುಂಬೈ ಪೊಲೀಸ್ ಹೆಸರಿನಲ್ಲಿ 9.94 ಲಕ್ಷ ರೂ ವಂಚನೆ

ಕಾರವಾರ: ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಮಹಿಳೆಯೊಬ್ಬರನ್ನು ಬೆದರಿಸಿ ಸುಮಾರು 9.94 ಲಕ್ಷ ರೂ ಹಣ ವಂಚಿಸಿರುವ ಘಟನೆ ಕಾರವಾರ ತಾಲೂಕಿನ ಚಿತ್ತಾಕುಲದಲ್ಲಿ ವರದಿಯಾಗಿದೆ.

ಚಿತ್ತಾಕುಲದ ಬೆಟ್ಟನಾಯ್ಕವಾಡದ ರೇಷ್ಮಾ ಗಜಾನನ ಕೇಣಿ (41) ವಂಚನೆಗೆ ಒಳಗಾದ ಮಹಿಳೆ. ಅವರು ಮನೆಯಲ್ಲಿ ಒಂಟಿಯಾಗಿ ವಾಸವಾಗಿದ್ದು, ಇದೇ ವಿಚಾರವನ್ನು ಬಳಸಿಕೊಂಡು ವಂಚಕರು ಭಯ ಹುಟ್ಟಿಸಿ ಹಣ ಪಡೆದುಕೊಂಡಿದ್ದಾರೆ.

ಜನವರಿ 23ರಂದು ಕೊರಿಯರ್ ಬಾಯ್ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ ಫೋನ್ ಮಾಡಿ, ಅವರ ಹೆಸರಿನಲ್ಲಿ ಬಂದ ಪಾರ್ಸಲ್‌ನಲ್ಲಿ ಐಫೋನ್, ಚಿನ್ನದ ಸರ ಹಾಗೂ ಮಾದಕ ವಸ್ತುಗಳಿವೆ ಎಂದು ತಿಳಿಸಿದ್ದಾನೆ.

ಇದಕ್ಕೆ ರೇಷ್ಮಾ ಕೇಣಿ ಅವರು ಆ ಪಾರ್ಸಲ್ ತಮ್ಮದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬಳಿಕ “ನಿಮ್ಮ ಹೆಸರು ಮತ್ತು ವಿಳಾಸ ದುರುಪಯೋಗವಾಗಿದೆ. ಪೊಲೀಸ್ ದೂರು ಕೊಡಬೇಕು” ಎಂದು ಹೇಳಿ, ಪೊಲೀಸರಿಗೆ ಮಾಹಿತಿ ನೀಡುವುದಾಗಿ ನಂಬಿಸಿದ್ದಾನೆ.

ಕೆಲವೇ ಹೊತ್ತಿನಲ್ಲಿ ಖಾಕಿ ಉಡುಪಿನಲ್ಲಿದ್ದ ವ್ಯಕ್ತಿಯೊಬ್ಬ ವಿಡಿಯೋ ಕಾಲ್ ಮಾಡಿ ತಾನು ಮುಂಬೈ ಪೊಲೀಸ್ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದಾನೆ. ನಿಮ್ಮ ಹೆಸರಿನಲ್ಲಿ 2 ಕೋಟಿ ರೂ ಅಕ್ರಮ ಹಣ ವರ್ಗಾವಣೆ ನಡೆದಿದ್ದು, ಪ್ರಕರಣದಲ್ಲಿ ನಿಮ್ಮ ಪಾತ್ರವಿದೆ ಎಂದು ಬೆದರಿಕೆ ಹಾಕಿದ್ದಾನೆ. ಜೊತೆಗೆ ಇಡಿ ಹಾಗೂ ಸಿಐಡಿ ತನಿಖೆ ನಡೆಯಲಿದೆ ಎಂದು ಹೇಳಿ, ಬಂಧಿಸುವುದಾಗಿ ಹೆದರಿಸಿದ್ದಾನೆ.

ಮಹಿಳೆ ಮನೆಯಲ್ಲಿ ಒಂಟಿಯಾಗಿರುವುದನ್ನು ತಿಳಿದುಕೊಂಡ ಬಳಿಕ, “ಖಾತೆಯಲ್ಲಿರುವ ಹಣವನ್ನು ಸರ್ಕಾರದ ಖಾತೆಗೆ ಜಮಾ ಮಾಡಬೇಕು. ತನಿಖೆಯ ಬಳಿಕ ನೀವು ನಿರಪರಾಧಿ ಎಂದು ಸಾಬೀತಾದರೆ ಹಣ ಮರಳಿಸುತ್ತೇವೆ” ಎಂದು ನಂಬಿಸಿದ್ದಾರೆ. ಇದರಿಂದ ಭಯಗೊಂಡ ಕೇಣಿ ಅವರು ಏಪ್ರಿಲ್ 9ರವರೆಗೆ ಹಂತ ಹಂತವಾಗಿ 9.94 ಲಕ್ಷ ರೂ ಹಣ ವರ್ಗಾವಣೆ ಮಾಡಿದ್ದಾರೆ.

ಬಳಿಕ ಕರೆ ಮಾಡಿದವರು ನಿಜವಾದ ಪೊಲೀಸರಲ್ಲ ಎಂಬುದು ಗೊತ್ತಾಗಿ, ತಾವು ಡಿಜಿಟಲ್ ಅರೆಸ್ಟ್ ವಂಚನೆಗೆ ಒಳಗಾಗಿರುವುದನ್ನು ಅರಿತು ನೈಜ ಪೊಲೀಸರ ಮೊರೆ ಹೋಗಿದ್ದಾರೆ. ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share