ಬೆಂಗಳೂರು: ರಾಜ್ಯ ರಾಜಕೀಯದ ಕುರಿತು ಭವಿಷ್ಯ ನುಡಿದು ಸುದ್ದಿಯಾಗುತ್ತಿರುವ ಶಿವರಾತ್ರಿ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ಮತ್ತೊಮ್ಮೆ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣರಾಗಿದ್ದಾರೆ. ಶಿವರಾತ್ರಿ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯ ರಾಜಕಾರಣದಲ್ಲಿ ಮಹತ್ವದ ಬದಲಾವಣೆಗಳ ಸೂಚನೆ ನೀಡಿದ್ದಾರೆ.
ಈ ಹಿಂದೆ ಸಂಕ್ರಾಂತಿ ಬಳಿಕ ಬಜೆಟ್ ಮಂಡನೆಯಾಗುತ್ತದೆ ಎಂದು ಹೇಳಿದ್ದೆ, ಅದು ಹಾಗೆಯೇ ನಡೆದಿದೆ ಎಂದು ಅವರು ನೆನಪಿಸಿದರು. ಈಗ ಯುಗಾದಿ ಹಬ್ಬದ ನಂತರ ರಾಜಕೀಯದಲ್ಲಿ ಮಹತ್ತರ ಬದಲಾವಣೆಗಳಾಗುವ ಸಾಧ್ಯತೆ ಇದೆ ಎಂದು ಸೂಚಿಸಿದರು. ಆದರೆ ಮುಖ್ಯಮಂತ್ರಿಗಳು ತಮ್ಮಷ್ಟಕ್ಕೆ ತಾವೇ ಅಧಿಕಾರ ಬಿಟ್ಟುಕೊಟ್ಟರೆ ಮಾತ್ರ ಬದಲಾವಣೆ ಸಾಧ್ಯ; ಇಲ್ಲದಿದ್ದರೆ ಸದ್ಯಕ್ಕೆ ಸರ್ಕಾರಕ್ಕೆ ಅಥವಾ ರಾಜಕೀಯ ಸ್ಥಿತಿಗೆ ಯಾವುದೇ ತೊಂದರೆ ಇಲ್ಲ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
ಇದೇ ವೇಳೆ, ಶಿವರಾತ್ರಿ ಪೂಜೆ ನಿಮಿತ್ತ ಅವರು ಕಾಶಿಗೆ ಭೇಟಿ ನೀಡಿದ್ದು, ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ದರ್ಶನ ಪಡೆದಿರುವುದಾಗಿ ತಿಳಿಸಿದರು. ಜೊತೆಗೆ ಪ್ರಯಾಗರಾಜ್‌ಗೂ ತೆರಳಿ ಪ್ರಾರ್ಥನೆ ಸಲ್ಲಿಸಿದ್ದಾಗಿ ಹೇಳಿದರು. ಕರ್ನಾಟಕದಲ್ಲಿ ಮಳೆ-ಬೆಳೆ ಸಮೃದ್ಧಿಯಾಗಿ ಆಗಿ, ಸುಖ-ಶಾಂತಿ ನೆಲೆಸಲಿ ಎಂದು ಪ್ರಾರ್ಥಿಸಿದ್ದಾಗಿ ತಿಳಿಸಿದರು.
ಕರ್ನಾಟಕದಲ್ಲಿ ಈ ವರ್ಷ ಮಳೆ-ಬೆಳೆಗೆ ಯಾವುದೇ ಸಮಸ್ಯೆ ಇಲ್ಲ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ ಅವರು, ಜಗತ್ತಿನ ಮಟ್ಟದಲ್ಲಿ ಸಮಸ್ಯೆಗಳ ವಾತಾವರಣ ಕಂಡು ಬರುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.