ಲಕ್ಷ್ಮೇಶ್ವರ: ಗದಗ-ಲಕ್ಷ್ಮೇಶ್ವರ ರಸ್ತೆ ಪಕ್ಕದ ಜಮೀನೊಂದರಲ್ಲಿ ತಾಲೂಕಿನ ಶಿಗ್ಲಿ ಗ್ರಾಮದ ನಿವಾಸಿ ಮಹಮ್ಮದ್ ಫಾರೂಕ್ ಹುಸೇನ್‌ಸಾಬ್ ಶೇಖ್ ಸನದಿ (29) ಅವರನ್ನು ಫೆಬ್ರವರಿ 28ರಂದು ಕೊ*ಲೆ ಮಾಡಿ ಎಸೆದಿರುವ ಘಟನೆ ಜಿಲ್ಲೆಯಲ್ಲೇ ಸಂಚಲನ ಮೂಡಿಸಿತ್ತು.
ಯುವಕ ಕಾಣೆಯಾಗಿರುವ ಬಗ್ಗೆ ಕುಟುಂಬಸ್ಥರು ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಬೆನ್ನಲ್ಲೇ ಪೊಲೀಸರು ತೀವ್ರ ಶೋಧ ಕಾರ್ಯ ನಡೆಸಿದಾಗ ಯುವಕನನ್ನು ಹತ್ಯೆ ಮಾಡಿ ಹೊಲದಲ್ಲಿ ಬಿಸಾಡಿರುವುದು ಬೆಳಕಿಗೆ ಬಂದಿದೆ.
ಸುದ್ದಿ ತಿಳಿದ ತಕ್ಷಣ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ ಹಾಗೂ ಡಿವೈಎಸ್‌ಪಿ ಮುರ್ತುಜಾ ಖಾದ್ರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿದರು. ಸಿಪಿಐ ಬಿ.ವಿ. ನ್ಯಾಮಗೌಡ್ರ ಅವರ ನೇತೃತ್ವದಲ್ಲಿ ಪಿಎಸ್‌ಐ ನಾಗರಾಜ ಗಡದ ಹಾಗೂ ಸಿಬ್ಬಂದಿಗಳ ತಂಡ ರಾತ್ರಿಯೇ ಬಲೆ ಬೀಸಿ ಕೇವಲ 24 ಗಂಟೆಗಳೊಳಗೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಯಿತು.
ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಅಣ್ಣಿಗೇರಿ ಗ್ರಾಮದ ದಾವಲಸಾಬ ಪಾಪಾಸಾಬ್ ಮಕಾನದಾರ (22), ಮುಕ್ತುಂಹುಸೇನ್ ಹುಸೇನಸಾಬ್ ತಹಸೀಲ್ದಾರ (23), ಅಜಯಕುಮಾರ ಮಂಜುನಾಥ ಬಿಳೆಬಾಳ (18) ಹಾಗೂ ಮಹ್ಮದ್ ಹುಸೇನ್ ದಸ್ತಗೀರಸಾಬ್ ಸಂಗಟಿ (16) ಈ ಕೃತ್ಯದಲ್ಲಿ ಭಾಗಿಯಾಗಿರುವುದು ತಿಳಿದುಬಂದಿದೆ.
ಆರೋಪಿ ದಾವಲಸಾಬ ಅವರಿಗೆ ಕುಂದಗೋಳ ತಾಲೂಕಿನ ತರ್ಲಘಟ್ಟ ಗ್ರಾಮದ ಯುವತಿಯೊಂದಿಗೆ ಪರಿಚಯ ಬೆಳೆದು ಪ್ರೀತಿಸುತ್ತಿದ್ದನೆಂದು ಹೇಳಲಾಗಿದೆ. ಆದರೆ ಆ ಯುವತಿಯ ಮದುವೆಯನ್ನು ಒಂದು ತಿಂಗಳ ಹಿಂದೆ ಮೃತ ಫಾರೂಕ್ ಅವರೊಂದಿಗೆ ನಿಶ್ಚಯ ಮಾಡಲಾಗಿತ್ತು. ಈ ವಿಷಯದಿಂದ ಆಕ್ರೋಶಗೊಂಡ ದಾವಲಸಾಬ ತನ್ನ ಸಹಚರರೊಂದಿಗೆ ಕಾರಿನಲ್ಲಿ ಲಕ್ಷ್ಮೇಶ್ವರಕ್ಕೆ ಬಂದು, ಫಾರೂಕ್ ಅವರನ್ನು ಊರ ಹೊರವಲಯಕ್ಕೆ ಕರೆದುಕೊಂಡು ಹೋಗಿ ಕೊಡಲಿ ಹಾಗೂ ಚಾಕುವಿನಿಂದ ಹ*ಲ್ಲೆ ನಡೆಸಿ ಕೊ*ಲೆಗೈದು, ಶವವನ್ನು ಹೊಲದಲ್ಲಿ ಬಿಸಾಡಿ ಪರಾರಿಯಾಗಿದ್ದರು.
ತೀವ್ರ ತನಿಖೆ ನಡೆಸಿ ಪ್ರಕರಣವನ್ನು ಶೀಘ್ರವೇ ಭೇದಿಸಿದ ಪೊಲೀಸ್ ತಂಡದ ಕಾರ್ಯಕ್ಕೆ ಎಸ್‌ಪಿ ರೋಹನ್ ಜಗದೀಶ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.