ಕಾರವಾರ: ದ್ವಿಪಥ ರೈಲು ಮಾರ್ಗ ಕಾಮಗಾರಿಯಿಂದಾಗಿ ಭಾಗಶಃ ಸ್ಥಗಿತಗೊಂಡಿದ್ದ ಲೊಂಡಾ–ಕ್ಯಾಸಲ್ ರಾಕ್ ನಡುವಿನ ರೈಲು ಸೇವೆಯನ್ನು ಆಗಸ್ಟ್ 15ರಿಂದ ಪುನರಾರಂಭಿಸಲು ನೈರುತ್ಯ ರೈಲ್ವೆ ಇಲಾಖೆ ಅಧಿಕೃತ ಆದೇಶ ಹೊರಡಿಸಿದೆ. ಇದರಿಂದ ಜೋಯಿಡಾ, ಕ್ಯಾಸಲ್ ರಾಕ್ ಹಾಗೂ ಸುತ್ತಮುತ್ತಲಿನ ಭಾಗದ ಸಾರ್ವಜನಿಕರ ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ.
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ್ದು, ಕ್ಯಾಸಲ್ ರಾಕ್ ಮತ್ತು ಜೋಯಿಡಾ ಭಾಗದ ಪ್ರಯಾಣಿಕರು ಎದುರಿಸುತ್ತಿದ್ದ ತೀವ್ರ ತೊಂದರೆಯನ್ನು ಮನಗಂಡು ರೈಲು ಸಂಚಾರವನ್ನು ಪುನರಾರಂಭಿಸುವಂತೆ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಸಾರ್ವಜನಿಕ ಹಿತದೃಷ್ಟಿಯಿಂದ ಮನವಿಯನ್ನು ಪರಿಗಣಿಸಿದ ರೈಲ್ವೆ ಸಚಿವಾಲಯವು ರೈಲು ಸೇವೆಗೆ ಅನುಮೋದನೆ ನೀಡಿದೆ ಎಂದು ಅವರು ಹೇಳಿದ್ದಾರೆ.
ಹೊಸ ಆದೇಶದಂತೆ, ರೈಲು ಸಂಖ್ಯೆ 17333 (ಮಿರಜ್–ಕ್ಯಾಸಲ್ ರಾಕ್ ಎಕ್ಸ್ಪ್ರೆಸ್) ಆಗಸ್ಟ್ 15, 2026ರಿಂದ ಲೊಂಡಾದ ಬದಲಿಗೆ ನೇರವಾಗಿ ಕ್ಯಾಸಲ್ ರಾಕ್ (CLR)ವರೆಗೆ ಸಂಚರಿಸಲಿದೆ. ಅದೇ ರೀತಿ, ರೈಲು ಸಂಖ್ಯೆ 17334 (ಕ್ಯಾಸಲ್ ರಾಕ್–ಮಿರಜ್ ಎಕ್ಸ್ಪ್ರೆಸ್) ಕೂಡ ಆಗಸ್ಟ್ 15ರಿಂದ ಕ್ಯಾಸಲ್ ರಾಕ್ನಿಂದಲೇ ತನ್ನ ಪ್ರಯಾಣವನ್ನು ಆರಂಭಿಸಲಿದೆ.
ಕ್ಷೇತ್ರದ ಜನರ ಬಹುದಿನಗಳ ಬೇಡಿಕೆಗೆ ಸ್ಪಂದಿಸಿ ರೈಲು ಸೇವೆ ಪುನರಾರಂಭಿಸಲು ಕ್ರಮ ಕೈಗೊಂಡ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಹಾಗೂ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಸಮಸ್ತ ಕ್ಷೇತ್ರದ ಜನರ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.
ಪುನರಾರಂಭವಾಗುತ್ತಿರುವ ಈ ರೈಲು ಸೇವೆಯ ಸೌಲಭ್ಯವನ್ನು ಕ್ಷೇತ್ರದ ಪ್ರಯಾಣಿಕರು ಹಾಗೂ ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.