ಶಿರಸಿ: ತಾಲೂಕಿನ ಬನವಾಸಿ ವಲಯದ ಎಕ್ಕಂಬಿ ಶಾಖೆಯ ಹೆಬ್ಬಳ್ಳಿ ಗ್ರಾಮದಲ್ಲಿ ಮನೆಯ ಮುಂದೆ ನಿಲ್ಲಿಸಿದ್ದ ಟ್ರ್ಯಾಕ್ಟರ್ನ ಬಾನೆಟ್ ಒಳಗೆ ನಾಗರಹಾವು ಸೇರಿಕೊಂಡ ಘಟನೆ ನಡೆದಿದೆ. ಸಮಯೋಚಿತವಾಗಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರಿಂದ ಹಾವನ್ನು ಸುರಕ್ಷಿತವಾಗಿ ರಕ್ಷಿಸಿ ಕಾಡಿಗೆ ಬಿಡಲಾಗಿದೆ.
ಹೆಬ್ಬಳ್ಳಿ ಗ್ರಾಮದ ನಾಗರಾಜ್ ನಾಯ್ಕ ಅವರ ಮನೆಯ ಮುಂದೆ ನಿಲ್ಲಿಸಿದ್ದ ಟ್ರ್ಯಾಕ್ಟರ್ನ ಬಾನೆಟ್ ಒಳಗೆ ನಾಗರಹಾವು ಸೇರಿರುವುದನ್ನು ಗಮನಿಸಿದ ಪರಶುರಾಮ ಧರ್ಮ ನಾಯ್ಕ ಅವರು ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ಪಡೆದ ಪಾಳಾ ಉಪ ವಲಯ ಅರಣ್ಯಾಧಿಕಾರಿ ಸುನೀಲ್ ಹೊನ್ನಾವರ ಸ್ಥಳಕ್ಕೆ ಆಗಮಿಸಿ, ಎಚ್ಚರಿಕೆಯಿಂದ ಟ್ರ್ಯಾಕ್ಟರ್ ಬಾನೆಟ್ ಒಳಗಿದ್ದ ನಾಗರಹಾವನ್ನು ಸುರಕ್ಷಿತವಾಗಿ ಹೊರತೆಗೆದು ಸೆರೆಹಿಡಿದರು. ಬಳಿಕ ಹಾವನ್ನು ಸಮೀಪದ ಅರಣ್ಯ ಪ್ರದೇಶದಲ್ಲಿ ಸುರಕ್ಷಿತವಾಗಿ ಬಿಟ್ಟು ಮಾನವ–ವನ್ಯಜೀವಿ ಸಂಘರ್ಷವನ್ನು ತಪ್ಪಿಸಿದರು.
ಕಾರ್ಯಾಚರಣೆಯಲ್ಲಿ ವಿರೂಪಾಕ್ಷ, ಪ್ರದೀಪ್ ನಾಯ್ಕ, ಪರಶುರಾಮ್ ಹಾಗೂ ನಾಗರಾಜ್ ನಾಯ್ಕ ಸಹಕರಿಸಿದರು.
ಈ ವೇಳೆ ಅರಣ್ಯ ಇಲಾಖೆ, ‘ಹಾವಿನ ಬಗ್ಗೆ ಅನಗತ್ಯ ಭಯ ಬೇಡ, ಆದರೆ ಅಗತ್ಯ ಮುನ್ನೆಚ್ಚರಿಕೆ ಮತ್ತು ಜಾಗ್ರತೆ ಅಗತ್ಯ’ ಎಂದು ಸಾರ್ವಜನಿಕರಿಗೆ ಮನವಿ ಮಾಡಿದೆ.