ಮಂಡ್ಯ: ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಚುಂಚಗಹಳ್ಳಿ ಗ್ರಾಮದಲ್ಲಿ ಕುಟುಂಬ ವೈಷಮ್ಯದಿಂದ ಆಕ್ರೋಶಗೊಂಡ ಮಾವನೊಬ್ಬ ಅಳಿಯನ ಮನೆಗೆ ಬೆಂಕಿ ಹಚ್ಚಿದ ಘಟನೆ ನಡೆದಿದೆ.
ಪ್ರೀತಿಸಿ ಮದುವೆಯಾಗಿದ್ದ ವಿನೋದ್ ಮತ್ತು ಕಾವ್ಯಾ ದಂಪತಿಯ ವಿವಾಹಕ್ಕೆ ಆರಂಭದಿಂದಲೇ ಕಾವ್ಯಾ ಕುಟುಂಬದ ವಿರೋಧವಿತ್ತು. ಕಳೆದ ಗುರುವಾರ ಮನೆಯವರ ವಿರೋಧದ ನಡುವೆಯೂ ಇಬ್ಬರೂ ಮದುವೆಯಾಗಿದ್ದರು.
ಈ ವಿಚಾರಕ್ಕೆ ತೀವ್ರ ಅಸಮಾಧಾನಗೊಂಡ ಕಾವ್ಯಾ ತಂದೆ ಚನ್ನೇಗೌಡ, ಶನಿವಾರ ಬೆಳಿಗ್ಗೆ ಅಳಿಯ ವಿನೋದ್ ಅವರ ಮನೆಗೆ ಬೆಂಕಿ ಹಚ್ಚಿದ್ದಾಗಿ ಆರೋಪಿಸಲಾಗಿದೆ. ಬೆಂಕಿಯ ಜ್ವಾಲೆಗೆ ಮನೆಯಲ್ಲಿದ್ದ ಎಲೆಕ್ಟ್ರಾನಿಕ್ ಉಪಕರಣಗಳು, ಬಟ್ಟೆಬರೆ ಹಾಗೂ ಅಡುಗೆ ಸಾಮಗ್ರಿಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. ಘಟನೆ ಸಮಯದಲ್ಲಿ ಮನೆಯಲ್ಲಿ ಯಾರೂ ಇಲ್ಲದಿದ್ದರಿಂದ ಪ್ರಾಣಾಪಾಯ ತಪ್ಪಿದೆ ಎಂದು ತಿಳಿದುಬಂದಿದೆ.
ಮನೆಗೆ ಬೆಂಕಿ ಹಚ್ಚುವ ವೇಳೆ ಆರೋಪಿ ಚನ್ನೇಗೌಡನಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಸಂಬಂಧ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.