Friday, July 24, 2026
Join WhatsApp Group
HomeStateಮಂಗಳೂರಿನಲ್ಲಿ ಆರಂಭವಾಗಲಿದೆ ದೇಶದ ಮೊದಲ ಖಾಸಗಿ ಇ-ಬಸ್‌ ಸೇವೆ

ಮಂಗಳೂರಿನಲ್ಲಿ ಆರಂಭವಾಗಲಿದೆ ದೇಶದ ಮೊದಲ ಖಾಸಗಿ ಇ-ಬಸ್‌ ಸೇವೆ

ಮಂಗಳೂರು: ಕರಾವಳಿ ನಗರವಾದ ಮಂಗಳೂರು ಈಗ ಸಾರಿಗೆ ಕ್ಷೇತ್ರದಲ್ಲಿ ಮತ್ತೊಂದು ಮೈಲುಗಲ್ಲು ಸಾಧಿಸಲು ಸಜ್ಜಾಗಿದೆ. ಕೇಂದ್ರ ಸರ್ಕಾರವು ರಾಜ್ಯಕ್ಕೆ ಸುಮಾರು 250 ಎಲೆಕ್ಟ್ರಿಕ್ ಬಸ್‌ಗಳನ್ನು ಮಂಜೂರು ಮಾಡಿದ್ದು, ಈಗಾಗಲೇ ಬೆಂಗಳೂರು ಸೇರಿದಂತೆ ಕೆಲವು ನಗರಗಳಲ್ಲಿ ಇ-ಬಸ್‌ಗಳು ಓಡಾಟ ಆರಂಭಿಸಿವೆ. ಸರ್ಕಾರದ ಈ ಕ್ರಮ ಖಾಸಗಿ ಸಾರಿಗೆ ಸಂಸ್ಥೆಗಳಿಗೆ ಹೊಡೆತ ನೀಡಬಹುದು ಎಂಬ ವಿಶ್ಲೇಷಣೆಗಳು ನಡೆದಿದ್ದರೂ, ಇದೀಗ ಖಾಸಗಿ ವಲಯವೇ ಸರ್ಕಾರಕ್ಕೆ ಟಕ್ಕರ್ ನೀಡುವ ನಿರ್ಧಾರ ಕೈಗೊಂಡಿದೆ.

ಸರ್ಕಾರಿ ಇ-ಬಸ್‌ಗಳು ರಸ್ತೆಗಿಳಿಯುವ ಮೊದಲೇ, ಮಂಗಳೂರಿನಲ್ಲಿ ಖಾಸಗಿ ಸಾರಿಗೆ ವ್ಯವಸ್ಥೆಯಲ್ಲೇ ಮೊದಲ ಬಾರಿಗೆ ಎಲೆಕ್ಟ್ರಿಕ್‌ ಬಸ್‌ ಸೇವೆ ಆರಂಭವಾಗಲಿದೆ. ಫೆಬ್ರವರಿ 26, 2026ರಂದು ಈ ಇ-ಬಸ್‌ ಅಧಿಕೃತವಾಗಿ ರಸ್ತೆಗಿಳಿಯಲಿದ್ದು, ನಗರದ ಸಾರಿಗೆ ವ್ಯವಸ್ಥೆಯಲ್ಲಿ ಹೊಸ ಅಧ್ಯಾಯ ಆರಂಭವಾಗಲಿದೆ. ಈ ಮೂಲಕ ದೇಶದಲ್ಲೇ ಮೊದಲ ಖಾಸಗಿ ಇ-ಬಸ್‌ ಸೇವೆ ಆರಂಭಿಸುವ ನಗರ ಎಂಬ ಹೆಗ್ಗಳಿಕೆಗೆ ಮಂಗಳೂರು ಪಾತ್ರವಾಗುತ್ತಿದೆ.

ಇದರ ನಡುವೆ, ಕೆಎಸ್‌ಆರ್‌ಟಿಸಿ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಮಾರ್ಗಗಳಲ್ಲಿ 100 ಎಲೆಕ್ಟ್ರಿಕ್‌ ಬಸ್‌ಗಳನ್ನು ಪರಿಚಯಿಸಲು ಸಿದ್ಧತೆ ನಡೆಸುತ್ತಿದೆ. ಈ ಬೆಳವಣಿಗೆಯ ನಡುವೆ ಖಾಸಗಿ ಸಾರಿಗೆ ಸಂಸ್ಥೆ ಮುಂದಾಗಿ ಇವಿ ಬಸ್‌ ಸೇವೆ ಆರಂಭಿಸುತ್ತಿರುವುದು ಗಮನಾರ್ಹವಾಗಿದೆ.

ದಕ್ಷಿಣ ಕನ್ನಡ ಜಿಲ್ಲಾ ಬಸ್‌ ಮಾಲೀಕರ ಸಂಘದ ಮಾಜಿ ಅಧ್ಯಕ್ಷ ದಿಲ್ರಾಜ್‌ ಆಳ್ವಾ ಅವರು ಮಾಹಿತಿ ನೀಡಿದ್ದು, “ಫೆಬ್ರವರಿ 26ರಂದು ರೂಟ್‌ ಸಂಖ್ಯೆ 27ರಲ್ಲಿ ಹೊಸ ಎಲೆಕ್ಟ್ರಿಕ್‌ ಬಸ್‌ ಬಿಡುಗಡೆಗೊಳ್ಳಲಿದೆ. ತಯಾರಕರು ಒಂದೆರಡು ದಿನಗಳಲ್ಲಿ ವಾಹನವನ್ನು ತಲುಪಿಸಲಿದ್ದಾರೆ. ಬಳಿಕ ನಗರದಲ್ಲಿ ಇವಿ-ಬಸ್‌ಗಳು ಸಂಚರಿಸಿ ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆಗೆ ಚಾಲನೆ ನೀಡಲಿದೆ” ಎಂದು ತಿಳಿಸಿದ್ದಾರೆ.

ಪರಿಸರ ಸಂರಕ್ಷಣೆ, ಇಂಧನ ಉಳಿತಾಯ ಮತ್ತು ಶಬ್ದ ಮಾಲಿನ್ಯ ಕಡಿತದ ದೃಷ್ಟಿಯಿಂದ ಈ ಕ್ರಮ ಮಹತ್ವದ್ದಾಗಿದೆ. ಖಾಸಗಿ ವಲಯದ ಈ ಹೆಜ್ಜೆ ಮಂಗಳೂರಿನ ಸಾರಿಗೆ ಕ್ಷೇತ್ರದಲ್ಲಿ ಸ್ಪರ್ಧಾತ್ಮಕ ವಾತಾವರಣ ನಿರ್ಮಿಸಿ, ಪ್ರಯಾಣಿಕರಿಗೆ ಉತ್ತಮ ಸೇವೆ ಒದಗಿಸುವ ನಿರೀಕ್ಷೆ ಮೂಡಿಸಿದೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share