Friday, July 24, 2026
Join WhatsApp Group
HomeLocal Newsಏನು ನಿಮ್‌ ಪ್ರಾಬ್ಲೆಮ್ಮು?

ಏನು ನಿಮ್‌ ಪ್ರಾಬ್ಲೆಮ್ಮು?

ಮನರೇಗಾ ಕೂಲಿಕಾರರ ಸಮಸ್ಯೆ ಆಲಿಸಿದ ಜಿ.ಪಂ ಸಿಇಒ

ಮುಂಡಗೋಡ: ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ದಿಲೀಷ್ ಶಸಿ ಗುರುವಾರ ಮುಂಡಗೋಡ ತಾಲೂಕಿನಲ್ಲಿ ವಿವಿಧ ಗ್ರಾಮ ಪಂಚಾಯತ್, ಸರ್ಕಾರಿ ಕಟ್ಟಡ ಹಾಗೂ ಕಾಮಗಾರಿ ಸ್ಥಳಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಿದರು.

ಮುಂಡಗೋಡ ತಾಲೂಕಿನ ಮಳಗಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಸ್ಮಶಾನಕಟ್ಟೆ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳ ಪರಿಶೀಲಿಸಿ, ಕೂಲಿಕಾರರೊಂದಿಗೆ ಸಂವಾದ ನಡೆಸಿದರು. ಸ್ಥಳೀಯವಾಗಿ ಖಾಸಗಿ ಕೆಲಸಗಳಲ್ಲಿ ನರೇಗಾಕ್ಕಿಂತಲೂ ಕೂಲಿ ದರ ಹೆಚ್ಚಾಗಿದ್ದು, ಯೋಜನೆಯಡಿ ಕೂಲಿ ದರವನ್ನು ಹೆಚ್ಚಿಸಬೇಕು ಮತ್ತು ಬೇಸಿಗೆಯಲ್ಲಿ ರಿಯಾಯಿತಿ ನೀಡಬೇಕೆಂಬ ಕೂಲಿಕಾರರ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿ, ಆಯುಕ್ತಾಲಯದ ಗಮನಕ್ಕೆ ತರುವುದಾಗಿ ತಿಳಿಸಿದರು.

ಬಳಿಕ ಮಳಗಿ ಹಾಗೂ ಪಾಳಾ ಗ್ರಾಮ ಪಂಚಾಯತಿ ಕಚೇರಿಗಳಿಗೆ ಭೇಟಿ ನೀಡಿ, ವಿವಿಧ ಯೋಜನೆಗಳ ಪ್ರಗತಿ ಮತ್ತು ಪ್ರಮುಖ ಕಡತಗಳನ್ನು ಪರಿಶೀಲಿಸಿ, ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು. ಇದೇ ವೇಳೆ ಗ್ರಂಥಾಲಯ, ಕೂಸಿನ ಮನೆಗಳನ್ನು ಪರಿವೀಕ್ಷಣೆ ಮಾಡಿದರು.

ಪಾಳಾ ಐಟಿಐ ಕಾಲೇಜಿಗೆ ಭೇಟಿ ನೀಡಿ, ಆಡಳಿತ ಕಚೇರಿ, ಲ್ಯಾಬ್, ಬೋಧನಾ ಕೊಠಡಿ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಪರಿಶೀಲಿಸಿ, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಕಾಲೇಜಿನಲ್ಲಿರುವ ಸಮಸ್ಯೆ ಮತ್ತು ಬೇಡಿಕೆಗಳನ್ನು ಆಲಿಸಿದರು. ನಂತರ ಇಂದೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಪ್ಪ ಗ್ರಾಮದಲ್ಲಿ ಬೂದು ನೀರು ನಿರ್ವಹಣೆಗಾಗಿ ಸಮುದಾಯ ಮಟ್ಟದಲ್ಲಿ ಚರಂಡಿಯಲ್ಲಿ ನೀರು ಸಂಸ್ಕರಣಾ ಘಟಕ ವೀಕ್ಷಣೆ ಮಾಡಿ, ಉತ್ತಮ ರೀತಿಯಲ್ಲಿ ನಿರ್ವಹಿಸುವಂತೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿ ಟಿ.ವಾಯ್. ದಾಸನಕೊಪ್ಪ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಹಾಯಕ ಅಭಿಯಂತರರಾದ ದೀಪಾ ಎಸ್.ಶೆಡಗೇರಿ, ಕಿರಿಯ ಅಭಿಯಂತರರಾದ ಪ್ರದೀಪ್ ಭಟ್, ಗ್ರಾಪಂ ಪಿಡಿಒ, ನರೇಗಾ ತಾಂತ್ರಿಕ ಸಿಬ್ಬಂದಿ ಉಪಸ್ಥಿತರಿದ್ದರು.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share