ಮುಂಡಗೋಡ: ತಾಲೂಕಿನ ಕಾತೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಲಳ್ಳಿ ಗ್ರಾಮದಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ 75 ವರ್ಷದ ವೃದ್ಧೆ ಕಮಲವ್ವ ತಿರುಕಪ್ಪ ಆಡೂರ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮನೆಯಲ್ಲಿದ್ದ ಚಿನ್ನಾಭರಣ ಮತ್ತು ನಗದು ಹಣ ಕಳವಾಗಿರುವ ಕುರಿತು ವರದಿಯಾಗಿದೆ.
ವೃದ್ಧೆಯ ಮನೆಗೆ ನುಗ್ಗಿದ ದುಷ್ಕರ್ಮಿಗಳು ಕೊಲೆ ಮಾಡಿ, ಬೆಲೆಬಾಳುವ ವಸ್ತುಗಳನ್ನು ದೋಚಿಕೊಂಡು ಹೋಗಿರುವ ಶಂಕೆ ವ್ಯಕ್ತವಾಗಿದೆ. ಮೃತ ಕಮಲವ್ವ ಅವರಿಗೆ ಐವರು ಪುತ್ರರು ಮತ್ತು ಇಬ್ಬರು ಪುತ್ರಿಯರಿದ್ದಾರೆ ಎನ್ನಲಾಗಿದೆ. ಅವರ ಮನೆಯ ಪಕ್ಕದಲ್ಲೇ ಒಬ್ಬ ಮಗನ ಮನೆ ಇದ್ದು, ಘಟನೆ ನಡೆದಿರಬಹುದಾದ ಸಮಯದಲ್ಲಿ ಮಗ ಮತ್ತು ಸೊಸೆ ಊರಿಗೆ ತೆರಳಿದ್ದರು ಎಂದು ತಿಳಿದುಬಂದಿದೆ.
ಮತ್ತೊಬ್ಬ ಪುತ್ರ ಚಿತ್ರದುರ್ಗದಲ್ಲಿ ಜೆಸಿಬಿ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ವೃದ್ಧೆ ಮನೆಯಲ್ಲಿ ಒಬ್ಬರೇ ಇದ್ದ ಸಮಯದಲ್ಲಿ ಘಟನೆ ನಡೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಮನೆಯಲ್ಲಿದ್ದ ಸುಮಾರು 30 ಗ್ರಾಂ ಚಿನ್ನಾಭರಣ ಮತ್ತು 1.70 ಲಕ್ಷ ರೂ. ನಗದು ಹಣ ಕಳವಾಗಿರುವ ಮಾಹಿತಿ ಲಭ್ಯವಾಗಿದೆ. ಘಟನಾ ಸ್ಥಳಕ್ಕೆ ಮುಂಡಗೋಡ ಪೊಲೀಸ್ ಇನ್‌ಸ್ಪೆಕ್ಟರ್ ರಮೇಶ ಹಾನಾಪುರ ಮತ್ತು ಪಿಎಸ್‌ಐ ಮಂಜುನಾಥ ಗೌಡರ ನೇತೃತ್ವದ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದ್ದು, ಆರೋಪಿಗಳ ಪತ್ತೆ ಹಾಗೂ ಘಟನೆಯ ಹಿಂದಿನ ಕಾರಣಗಳ ಕುರಿತು ಅಧಿಕೃತ ಮಾಹಿತಿ ನಿರೀಕ್ಷಿಸಲಾಗಿದೆ.


