ಮುಂಡಗೋಡ: ಸಾರ್ವಜನಿಕ ರಸ್ತೆಯಲ್ಲಿ ಬರ್ತ್‌ಡೇ ಪಾರ್ಟಿ ನಡೆಸುತ್ತಿದ್ದವರನ್ನು ರಸ್ತೆಯಿಂದ ಪಕ್ಕಕ್ಕೆ ಸರಿಯುವಂತೆ ಕೇಳಿದ್ದಕ್ಕೆ ಸಂತೋಷ ಕಟ್ಟಿಮನಿ ಎನ್ನುವವರ ಮೇಲೆ ಮಂಜು ಸಂಕ್ರಪ್ಪ, ಪ್ರಜ್ವಲ್ ನಾರಾಯಣ ಕಟ್ಟಿಮನಿ ಹಾಗೂ ಶ್ರೇಯಸ್ ನಾರಾಯಣ ಕಟ್ಟಿಮನಿ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ್ದಾರೆ.
ಇದೇ ಆರೋಪದ ಮೇಲೆ ಮೂವರ ವಿರುದ್ಧ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಪ್ಪ ಗ್ರಾಮದ ಸಂತೋಷ ಕಟ್ಟಿಮನಿ (37) ಹಲ್ಲೆಗೊಳಗಾದವರು. ಅ. 14ರಂದು ರಾತ್ರಿ 9 ಗಂಟೆ ಸುಮಾರಿಗೆ ಪಟ್ಟಣದಲ್ಲಿ ಕೆಲಸ ಮುಗಿಸಿಕೊಂಡು ಸ್ಕೂಟಿಯಲ್ಲಿ ಮನೆಗೆ ಮರಳುತ್ತಿದ್ದಾಗ, ಕೊಪ್ಪ ಗ್ರಾಮದ ತಮ್ಮ ಮನೆಯ ಸಮೀಪದ ಸಾರ್ವಜನಿಕ ರಸ್ತೆಯಲ್ಲಿ ಬರ್ತ್‌ಡೇ ಪಾರ್ಟಿ ನಡೆಸುತ್ತಿದ್ದ ಮಂಜು ಸಂಕ್ರಪ್ಪ, ಪ್ರಜ್ವಲ್ ನಾರಾಯಣ ಕಟ್ಟಿಮನಿ ಹಾಗೂ ಶ್ರೇಯಸ್ ನಾರಾಯಣ ಕಟ್ಟಿಮನಿ ಎಂಬುವವರನ್ನು ರಸ್ತೆಯಿಂದ ಸ್ವಲ್ಪ ಪಕ್ಕಕ್ಕೆ ಸರಿಯುವಂತೆ ಕೇಳಿದ್ದಾರೆ ಎನ್ನಲಾಗಿದೆ.
ಈ ವೇಳೆ ಮೂವರು ಅವಾಚ್ಯವಾಗಿ ಬೈದು, ಕೈಯಿಂದ ಹಲ್ಲೆ ನಡೆಸಿ, ಕಾಲಿನಿಂದ ತುಳಿದಿದ್ದಾರೆ. ಅಲ್ಲದೆ, ಶ್ರೇಯಸ್ ಕಟ್ಟಿಮನಿ ಕಟ್ಟಿಗೆಯಿಂದ ತಲೆಗೆ ಹೊಡೆದಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಅವರಿಂದ ತಪ್ಪಿಸಿಕೊಂಡು ಓಡಿಹೋಗುವಾಗ ಜೀವ ಬೆದರಿಕೆ ಹಾಕಿದ್ದಾರೆ ಎಂದು ಸಂತೋಷ ದೂರಿನಲ್ಲಿ ತಿಳಿಸಿದ್ದಾರೆ.
ಈ ಕುರಿತು ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.


