ಮೈಸೂರು: ಮಾನವ–ಹುಲಿ ಸಂಘರ್ಷದ ಹಿನ್ನೆಲೆಯಲ್ಲಿ ಕಳೆದ ನವೆಂಬರ್ 7ರಂದು ಸ್ಥಗಿತಗೊಂಡಿದ್ದ ಸಫಾರಿಯನ್ನು ಫೆಬ್ರವರಿ 21ರಿಂದ ಷರತ್ತುಬದ್ಧವಾಗಿ ಪುನರಾರಂಭಿಸಲು ನಿರ್ಧರಿಸಲಾಗಿದೆ. ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಮೈಸೂರು, ಕೊಡಗು ಮತ್ತು ಚಾಮರಾಜನಗರ ವಿಭಾಗದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು, ಷರತ್ತುಗಳ ಉಲ್ಲಂಘನೆ ಕಂಡುಬಂದರೆ ಸಂಬಂಧಿತ ಅಧಿಕಾರಿಗಳೇ ಹೊಣೆಗಾರರಾಗುತ್ತಾರೆ ಎಂದು ಎಚ್ಚರಿಸಿದರು.
ನ.7ಕ್ಕೂ ಮೊದಲು ಬಳಕೆಯಲ್ಲಿದ್ದ ವಾಹನಗಳ ಶೇ.50ರಷ್ಟು ಮಾತ್ರ ಬಳಕೆ, ಬಸ್‌ಗಳ ಮೂಲಕ ಹೆಚ್ಚು ಸಫಾರಿ; ಕ್ಯಾಂಪರ್ ಮತ್ತು ಜೀಪ್‌ಗಳ ಬಳಕೆ ಕಡಿಮೆ, ಮಾನವ–ವನ್ಯಜೀವಿ ಸಂಘರ್ಷ ಪ್ರದೇಶಗಳಲ್ಲಿ ಗಸ್ತು ಹೆಚ್ಚಳ ಮಾಡಬೇಕೆಂಬ ಷರತ್ತು ವಿಧಿಸಲಾಗಿದೆ.
ಬಂಡೀಪುರ ಮತ್ತು ನಾಗರಹೊಳೆ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಸಂಘರ್ಷ ಪ್ರದೇಶಗಳನ್ನು ಗುರುತಿಸಿ ಗಸ್ತು ಬಲಪಡಿಸಲು ಸೂಚಿಸಲಾಗಿದೆ. ಬಂಡೀಪುರ ಅರಣ್ಯದ ಗಡಿಯಲ್ಲಿ 100 ಕಿ.ಮೀ ಸೂಕ್ಷ್ಮ ಪ್ರದೇಶವೆಂದು ಗುರುತಿಸಿ, ಪ್ರತಿ 5 ಕಿ.ಮೀಗೆ ಒಂದು ಶಿಬಿರದಂತೆ 25 ಶಿಬಿರ ಸ್ಥಾಪನೆ, ಸ್ಥಳೀಯರನ್ನು “ಕಾಡಿನ ಮಿತ್ರ”ರಾಗಿ ನೇಮಕ ಮಾಡುವುದಾಗಿ ತಿಳಿಸಲಾಗಿದೆ. ಥರ್ಮಲ್ ಡ್ರೋನ್ ಸೇರಿದಂತೆ ಅಗತ್ಯ ಸೌಲಭ್ಯಗಳಿಗೆ ಲಿಖಿತ ಪ್ರಸ್ತಾವನೆ ಸಲ್ಲಿಸಲು ಸೂಚನೆ ನೀಡಲಾಗಿದೆ.
ವನ್ಯಜೀವಿ ಸಂರಕ್ಷಣೆಯ ಜೊತೆಗೆ ಕಾಡಿನಂಚಿನ ನಿವಾಸಿಗಳ ಜೀವ ಮತ್ತು ಬೆಳೆ ರಕ್ಷಣೆಗೂ ಆದ್ಯತೆ ನೀಡಬೇಕು ಎಂದು ಸಚಿವರು ಹೇಳಿದ್ದಾರೆ. ಸಫಾರಿಯಿಂದ ಬರುವ ಆದಾಯದಲ್ಲಿ ಶೇ.35ರಷ್ಟು ಹಣವನ್ನು ಅರಣ್ಯದಂಚಿನ ಯುವಜನರ ಕೌಶಲ್ಯ ತರಬೇತಿ, ಜಾನುವಾರು ಮೇವು ಹಾಗೂ ಮಕ್ಕಳ ಶಿಕ್ಷಣಕ್ಕೆ ವಿನಿಯೋಗಿಸಲು ಸೂಚಿಸಲಾಗಿದೆ.
ಅರಣ್ಯ ಇಲಾಖೆ ಅಭಿವೃದ್ಧಿಪಡಿಸಿರುವ ಇ-ಗಸ್ತು ತಂತ್ರಾಂಶವನ್ನು ಕಡ್ಡಾಯವಾಗಿ ಬಳಸಬೇಕು. ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹೊರಗುತ್ತಿಗೆಯ ಸಿಬ್ಬಂದಿ ಇ-ಸ್ಟ್ರೈಪ್ ಬಳಕೆ ಮಾಡಬೇಕು ಎಂದು ತಿಳಿಸಲಾಗಿದೆ.
ಸಮಗ್ರ ಕಮಾಂಡ್ ಕೇಂದ್ರದಿಂದ ವನ್ಯಜೀವಿಗಳ ಚಲನವಲನದ ಮೇಲ್ವಿಚಾರಣೆ ಹಾಗೂ 1926 ಸಹಾಯವಾಣಿ ಕರೆಗಳಿಗೆ ತಕ್ಷಣ ಸ್ಪಂದನೆ ನೀಡುವಂತೆ ಸೂಚನೆ ನೀಡಲಾಗಿದೆ.