ಚಿಕ್ಕಮಗಳೂರು: ನಗರದ ಹಳೆ ಉಪ್ಪಳ್ಳಿ ಪ್ರದೇಶದ ಈಶ್ವರ ದೇವಸ್ಥಾನದಲ್ಲಿ ಪ್ರತಿದಿನ ಬೆಳಿಗ್ಗೆ ಸುಮಾರು 6.30ರಿಂದ 7 ಗಂಟೆಯವರೆಗೆ ಸುಪ್ರಭಾತ ಹಾಗೂ ಜಾಗಟೆ ಮೊಳಗಿಸಲಾಗುತ್ತಿದೆ. ಬೆಳಿಗ್ಗೆ 15 ನಿಮಿಷ ಮತ್ತು ಸಂಜೆ 15 ನಿಮಿಷ ಜಾಗಟೆ ಹಾಕುವುದರಿಂದ ಶಬ್ದ ಮಾಲಿನ್ಯ ಉಂಟಾಗುತ್ತಿದೆ ಎಂದು ಫಾರೂಕ್ ಎಂಬ ವ್ಯಕ್ತಿ ಬಸವನಹಳ್ಳಿ ಪೊಲೀಸ್ ಸ್ಟೇಷನ್‌ಗೆ ದೂರು ನೀಡಿದ್ದಾರೆ.
ದೂರಿನ ಹಿನ್ನೆಲೆಯಲ್ಲಿ ಪೊಲೀಸರು ದೇವಸ್ಥಾನಕ್ಕೆ ಭೇಟಿ ನೀಡಿ, ಅರ್ಚಕರಾದ ಜಗದೀಶ್ ಭಟ್ ಅವರಿಗೆ ಜಾಗಟೆಯ ಶಬ್ದ ಹೊರಗೆ ಕೇಳಿಸದಂತೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಜಾಗಟೆಯನ್ನು ಗರ್ಭಗುಡಿಯಲ್ಲಿ ಇಟ್ಟುಕೊಳ್ಳುವಂತೆ ಹಾಗೂ ದೇವಸ್ಥಾನದ ಸುತ್ತ ಎತ್ತರದ ಗೋಡೆ ನಿರ್ಮಿಸುವಂತೆ ಸಲಹೆ ನೀಡಲಾಗಿದೆ ಎನ್ನಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಅರ್ಚಕ ಜಗದೀಶ್ ಭಟ್, “ಇತರರ ಆಚರಣೆಗಳಿಗೆ ನಾವು ಗೌರವ ನೀಡುತ್ತೇವೆ. ನಮ್ಮ ಆಚರಣೆಗೂ ಗೌರವ ನೀಡಬೇಕು” ಎಂದು ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ.