ಕುಂದಾಪುರ: ಆನ್ಲೈನ್ ಟಾಸ್ಕ್ ಮೂಲಕ ಹೆಚ್ಚಿನ ಲಾಭ ನೀಡುವುದಾಗಿ ನಂಬಿಸಿ ಯುವಕನೊಬ್ಬರಿಂದ 5,39,200 ರೂ ಹಣ ವಂಚಿಸಿರುವ ಸೈಬರ್ ಮೋಸ ಪ್ರಕರಣ ಬೆಳಕಿಗೆ ಬಂದಿದೆ.
ದೂರುದಾರ ಪರಶುರಾಮ್ ಲಮಾಣಿ (29) ಅವರು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಕಾಗಿಹಾಳೆ ತಾಂಡೆ ನಿವಾಸಿ. ಫೆಬ್ರವರಿ 18, 2026ರಂದು ‘ಕಾವೇರಿ’ ಎಂದು ಪರಿಚಯಿಸಿಕೊಂಡ ವ್ಯಕ್ತಿ ಕರೆ ಮಾಡಿ, ಒಂದು ಲಿಂಕ್ ಕ್ಲಿಕ್ ಮಾಡಿ ಆನ್ಲೈನ್ ಟಾಸ್ಕ್ನಲ್ಲಿ ಭಾಗವಹಿಸಿದರೆ ಉತ್ತಮ ಲಾಭ ಸಿಗುತ್ತದೆ ಎಂದು ಹೇಳಿದ್ದಾನೆ. ತಾನೂ ಅದರಿಂದ ಲಾಭ ಪಡೆದಿದ್ದಾಗಿ ನಂಬಿಸಿ, ಹೂಡಿಕೆ ಮಾಡಲು ಪ್ರೇರೇಪಿಸಿದ್ದಾನೆ.
ಅದರಂತೆ ಫೆ. 19ರಂದು ಪಿರ್ಯಾದಿದಾರರು 2 ಲಕ್ಷ ರೂ ಹಣವನ್ನು RTGS ಮೂಲಕ ಗುಲಾಮ್ ಹುಸೈನ್ ಎಂಬವರ ಬ್ಯಾಂಕ್ ಖಾತೆಗೆ ವರ್ಗಾಯಿಸಿದ್ದಾರೆ. ಬಳಿಕ ಫೆಬ್ರವರಿ 20ರಂದು 2,40,000 ರೂ ಹಣವನ್ನು ಮೋನು ಯಾದವ್ ಅವರ ಖಾತೆಗೆ ಹಾಗೂ ಅದೇ ದಿನ 99,200 ರೂ ಹಣವನ್ನು ಕುಲದೀಪ್ ಎಂಬವರ ಖಾತೆಗೆ RTGS ಮೂಲಕ ಜಮಾ ಮಾಡಿದ್ದಾರೆ.
ಈ ರೀತಿ ಒಟ್ಟು 5,39,200 ರೂ ಹಣ ಹೂಡಿಕೆ ಮಾಡಿದರೂ ಯಾವುದೇ ಲಾಭವಾಗದೆ, ಮೂಲಧನವೂ ಮರಳಿ ಸಿಗದಿರುವುದರಿಂದ ತಾವು ಸೈಬರ್ ವಂಚನೆಗೆ ಒಳಗಾಗಿರುವುದು ತಿಳಿದುಬಂದಿದೆ.
ಈ ಕುರಿತು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಸಾರ್ವಜನಿಕರಿಗೆ ಎಚ್ಚರಿಕೆ
ಪೊಲೀಸರು ಆನ್ಲೈನ್ನಲ್ಲಿ ಹೆಚ್ಚು ಲಾಭದ ಆಮಿಷ ನೀಡುವ ಕರೆಗಳು, ಮೆಸೇಜ್ಗಳು ಮತ್ತು ಅಪರಿಚಿತ ಲಿಂಕ್ಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಮನವಿ ಮಾಡಿದ್ದಾರೆ. ಯಾವುದೇ ಹೂಡಿಕೆ ಮಾಡುವ ಮೊದಲು ಸಂಬಂಧಿತ ವೆಬ್ಸೈಟ್ ಹಾಗೂ ವ್ಯಕ್ತಿಗಳ ವಿಶ್ವಾಸಾರ್ಹತೆಯನ್ನು ಪರಿಶೀಲಿಸುವುದು ಅಗತ್ಯವೆಂದು ತಿಳಿಸಿದ್ದಾರೆ.