ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನಧನ ಯೋಜನೆ (PM-SYM) ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಸಾಮಾಜಿಕ ಭದ್ರತಾ ಯೋಜನೆಯಾಗಿದ್ದು, ಅಸಂಘಟಿತ ಕ್ಷೇತ್ರದಲ್ಲಿ ದುಡಿಯುವ ಕಾರ್ಮಿಕರಿಗೆ ವೃದ್ಧಾಪ್ಯದಲ್ಲಿ ಖಚಿತ ಪಿಂಚಣಿ ಒದಗಿಸುವ ಉದ್ದೇಶದಿಂದ 2019ರಲ್ಲಿ ಪ್ರಾರಂಭಿಸಲಾಗಿದೆ.
ಈ ಯೋಜನೆಯಡಿ 18ರಿಂದ 40 ವರ್ಷ ವಯಸ್ಸಿನೊಳಗಿನ, ತಿಂಗಳಿಗೆ 15 ಸಾವಿರಕ್ಕಿಂತ ಕಡಿಮೆ ಆದಾಯ ಹೊಂದಿರುವ ಮತ್ತು EPFO, ESIC ಅಥವಾ NPS ಯೋಜನೆಗಳಿಗೆ ಸದಸ್ಯರಾಗದ ಹಾಗೂ ಆದಾಯ ತೆರಿಗೆ ಪಾವತಿಸದ ಅಸಂಘಟಿತ ಕಾರ್ಮಿಕರು ನೋಂದಣಿ ಮಾಡಿಕೊಳ್ಳಬಹುದು.
ಬೀದಿ ವ್ಯಾಪಾರಿಗಳು, ಹಮಾಲಿಗಳು, ಕೂಲಿ ಕಾರ್ಮಿಕರು, ಮನೆ ಕೆಲಸಗಾರರು, ಕೃಷಿ ಕಾರ್ಮಿಕರು, ರಿಕ್ಷಾ ಚಾಲಕರು ಸೇರಿದಂತೆ ವಿವಿಧ ವಲಯದ ಶ್ರಮಿಕರು ಇದರ ಪ್ರಯೋಜನ ಪಡೆಯಬಹುದು. ನೋಂದಾಯಿತ ಸದಸ್ಯರು ತಮ್ಮ ವಯಸ್ಸಿನ ಆಧಾರದ ಮೇಲೆ ಪ್ರತಿ ತಿಂಗಳು 55ರಿಂದ 200 ರೂವರೆಗೆ ಮೊತ್ತವನ್ನು 60 ವರ್ಷ ವಯಸ್ಸಿನವರೆಗೆ ಜಮಾ ಮಾಡಬೇಕು, ಕೇಂದ್ರ ಸರ್ಕಾರ ಸಮಾನ ಪ್ರಮಾಣದ ಮೊತ್ತವನ್ನು ನೀಡುತ್ತದೆ.
60 ವರ್ಷ ಪೂರೈಸಿದ ನಂತರ ಅವರಿಗೆ ಪ್ರತಿ ತಿಂಗಳು 3 ಸಾವಿರ ರೂ ನಿಗದಿತ ಪಿಂಚಣಿ ಲಭ್ಯವಾಗುತ್ತದೆ. ಸದಸ್ಯರ ನಿಧನವಾದಲ್ಲಿ ಅವರ ಪತಿ ಅಥವಾ ಪತ್ನಿಗೆ ಪಿಂಚಣಿಯ ಶೇ. 50 ಕುಟುಂಬ ಪಿಂಚಣಿಯಾಗಿ ದೊರೆಯುತ್ತದೆ. 60 ವರ್ಷಕ್ಕೂ ಮುನ್ನ ಸದಸ್ಯರು ಮೃತಪಟ್ಟರೆ, ಸಂಗಾತಿ ಯೋಜನೆಯನ್ನು ಮುಂದುವರಿಸಿ ನಿರ್ವಹಿಸಬಹುದಾಗಿದೆ ಅಥವಾ ಜಮಾ ಮಾಡಿದ ಮೊತ್ತವನ್ನು ಬಡ್ಡಿಸಹಿತ ಹಿಂತೆಗೆದುಕೊಳ್ಳುವ ಅವಕಾಶವಿದೆ. ನೋಂದಣಿ ಪ್ರಕ್ರಿಯೆ Common Service Centre (CSC)ಗಳ ಮೂಲಕ ಅಥವಾ ಅಧಿಕೃತ ಪೋರ್ಟಲ್ನಲ್ಲಿ ಆಧಾರ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆ ವಿವರಗಳೊಂದಿಗೆ ಸುಲಭವಾಗಿ ಮಾಡಬಹುದು.
ಅರ್ಜಿ ಸಲ್ಲಿಕೆ: PM-SYM ಯೋಜನೆಗೆ ನೀವು ಎರಡು ವಿಧಾನಗಳಲ್ಲಿ ನೋಂದಣಿ ಮಾಡಿಕೊಳ್ಳಬಹುದು—ಆನ್ಲೈನ್ ಮೂಲಕ ಅಥವಾ ಸಮೀಪದ Common Service Centre (CSC) ಮೂಲಕ. ಅರ್ಜಿ ಹಾಕಲು ಮೊದಲು maandhan.in ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ. ಅಲ್ಲಿ “Self Enrollment” ಅಥವಾ “Click Here to Apply” ಆಯ್ಕೆಮಾಡಿ.
ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ OTP ಮೂಲಕ ಪರಿಶೀಲಿಸಿ. ನಂತರ ನಿಮ್ಮ ಆಧಾರ್ ಸಂಖ್ಯೆ, ಹೆಸರು, ಜನ್ಮ ದಿನಾಂಕ, ಬ್ಯಾಂಕ್ ಖಾತೆ ವಿವರಗಳು (IFSC ಸಹಿತ), ನಾಮಿನಿ ವಿವರಗಳನ್ನು ನಮೂದಿಸಬೇಕು. ಕೊಡುಗೆ ಮೊತ್ತ ಬ್ಯಾಂಕ್ ಖಾತೆಯಿಂದ ಸ್ವಯಂ ಕಡಿತವಾಗಲು (Auto-debit mandate) ಅನುಮತಿ ನೀಡಬೇಕು.
ಆನ್ಲೈನ್ ಮಾಡುವಲ್ಲಿ ಅನುಕೂಲವಿಲ್ಲದಿದ್ದರೆ, ಸಮೀಪದ Common Service Centre (CSC)ಗೆ ತೆರಳಿ ನೋಂದಣಿ ಮಾಡಿಸಬಹುದು. ಅಲ್ಲಿ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ಬುಕ್ (IFSC ಸಹಿತ) ಮತ್ತು ಸಕ್ರಿಯ ಮೊಬೈಲ್ ಸಂಖ್ಯೆ ಕೊಂಡೊಯ್ಯಬೇಕು. CSC ನಿರ್ವಾಹಕರು ನಿಮ್ಮ ವಿವರಗಳನ್ನು ದಾಖಲಿಸಿ, ಮೊದಲ ತಿಂಗಳ ಕೊಡುಗೆಯನ್ನು ಸ್ವೀಕರಿಸಿ, Auto-debit ಪ್ರಕ್ರಿಯೆ ಪೂರ್ಣಗೊಳಿಸುತ್ತಾರೆ. ನೋಂದಣಿ ಯಶಸ್ವಿಯಾದ ನಂತರ ನಿಮಗೆ Shram Yogi Pension Account Number (SPAN) ಮತ್ತು ಮಾನ್ಧನ್ ಕಾರ್ಡ್ ನೀಡಲಾಗುತ್ತದೆ.
ಅಗತ್ಯ ದಾಖಲೆಗಳು:
ಆಧಾರ್ ಕಾರ್ಡ್
ಉಳಿತಾಯ / ಜನಧನ್ ಬ್ಯಾಂಕ್ ಖಾತೆ
ಮೊಬೈಲ್ ಸಂಖ್ಯೆ
ಪ್ರಥಮ ತಿಂಗಳ ಕೊಡುಗೆ ಮೊತ್ತ