Ad
Ad
Ad
Home Local News ಪೊಲೀಸ್ ಹುತಾತ್ಮರ ತ್ಯಾಗ, ಸಮರ್ಪಣೆ ಸ್ಮರಣೀಯ: ಡಿಸಿ

ಪೊಲೀಸ್ ಹುತಾತ್ಮರ ತ್ಯಾಗ, ಸಮರ್ಪಣೆ ಸ್ಮರಣೀಯ: ಡಿಸಿ

0
4

ಕಾರವಾರ: ಪೊಲೀಸ್ ಹುತಾತ್ಮರ ದಿನಾಚರಣೆ ಕೇವಲ ಸ್ಮರಣೆಯ ದಿನವಲ್ಲ. ಅಪಾಯಗಳ ನಡುವೆಯೂ ಜನರ ಸುರಕ್ಷತೆಗಾಗಿ ಸೇವೆ ಸಲ್ಲಿಸುವ ಪೊಲೀಸ್ ಸಿಬ್ಬಂದಿಯ ಧೈರ್ಯ, ಸಮರ್ಪಣೆ ಮತ್ತು ತ್ಯಾಗವನ್ನು ಗೌರವಿಸುವ ದಿನವಾಗಿದೆ ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಹೇಳಿದರು.

Ad

ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ಬುಧವಾರ ನಡೆದ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಹುತಾತ್ಮರ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

ಜನರು ಮನೆಯಲ್ಲಿ ನೆಮ್ಮದಿಯಿಂದ ನಿದ್ರಿಸುವಾಗ ಪೊಲೀಸರು ಕರ್ತವ್ಯ ನಿರ್ವಹಿಸುತ್ತಾರೆ. ಹಬ್ಬ-ಹರಿದಿನಗಳಲ್ಲಿ ಜನಸಂದಣಿ ನಿಯಂತ್ರಿಸಿ ಭದ್ರತೆ ಒದಗಿಸುವುದರ ಜೊತೆಗೆ, ಅಪಘಾತ, ಪ್ರಕೃತಿ ವಿಕೋಪ ಮತ್ತು ಕೋಮು ಉದ್ವಿಗ್ನತೆಯಂತಹ ತುರ್ತು ಸಂದರ್ಭಗಳಲ್ಲಿ ಜನರ ರಕ್ಷಣೆಗಾಗಿ ಜೀವವನ್ನೇ ಪಣಕ್ಕಿಡುತ್ತಾರೆ. ಇಂತಹ ಸಿಬ್ಬಂದಿಯ ಸೇವೆ, ಧೈರ್ಯ ಮತ್ತು ಕರ್ತವ್ಯನಿಷ್ಠೆಯನ್ನು ಸಮಾಜ ಸದಾ ಗೌರವಿಸಬೇಕು ಎಂದರು.

ಪ್ರತಿಯೊಬ್ಬ ಪೊಲೀಸ್ ಸಿಬ್ಬಂದಿಯ ಸಮವಸ್ತ್ರದ ಹಿಂದೆ ಒಂದು ಕುಟುಂಬವಿರುತ್ತದೆ. ಹೀಗಾಗಿ, ಹುತಾತ್ಮರಿಗೆ ಸಲ್ಲಿಸುವ ಗೌರವ ಪುಷ್ಪನಮನ ಮತ್ತು ಗೌರವ ವಂದನೆಗೆ ಮಾತ್ರ ಸೀಮಿತವಾಗಬಾರದು. ಅವರ ಕುಟುಂಬಗಳನ್ನು ನೆನಪಿಸಿಕೊಂಡು ಅಗತ್ಯ ಬೆಂಬಲ ನೀಡಬೇಕು. ಅವರ ತ್ಯಾಗವನ್ನು ಎಂದಿಗೂ ಮರೆಯಬಾರದು ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿಲೀಶ್ ಶಶಿ ಮಾತನಾಡಿ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಪೊಲೀಸರ ಹೊಣೆ ಮಾತ್ರವಲ್ಲ. ಸಾರ್ವಜನಿಕರ ಸಹಕಾರವೂ ಅಗತ್ಯ. ಪ್ರತಿಯೊಬ್ಬರೂ ಕಾನೂನು ಪಾಲಿಸುವುದು, ಇತರರ ಹಕ್ಕುಗಳನ್ನು ಗೌರವಿಸುವುದು ಹಾಗೂ ಅಪರಾಧ ತಡೆಗೆ ಸಹಕರಿಸುವುದು ಮುಖ್ಯ ಎಂದರು.

ಪೊಲೀಸರು ದೀರ್ಘ ಕೆಲಸದ ಅವಧಿ, ಮಾನಸಿಕ ಒತ್ತಡ ಮತ್ತು ಅಪಾಯಕಾರಿ ಪರಿಸ್ಥಿತಿಗಳನ್ನು ಎದುರಿಸುತ್ತಾರೆ. ಅವರಿಗೆ ಸೂಕ್ತ ತರಬೇತಿ, ಆಧುನಿಕ ಸಾಧನಗಳು, ಸಾಕಷ್ಟು ಸಿಬ್ಬಂದಿ ಹಾಗೂ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಅಗತ್ಯ ಬೆಂಬಲ ಒದಗಿಸಬೇಕು ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಅವರು ವಿವಿಧ ಕಾರ್ಯಾಚರಣೆಗಳಲ್ಲಿ ಕರ್ತವ್ಯ ನಿರ್ವಹಿಸುವಾಗ ಪ್ರಾಣತ್ಯಾಗ ಮಾಡಿದ ಪೊಲೀಸ್ ಸಿಬ್ಬಂದಿಯ ಹೆಸರುಗಳನ್ನು ವಾಚಿಸಿದರು.

ಕಾರ್ಯಕ್ರಮದಲ್ಲಿ ಹುತಾತ್ಮ ಪೊಲೀಸ್ ಸಿಬ್ಬಂದಿಯ ಗೌರವಾರ್ಥ ಎರಡು ನಿಮಿಷ ಮೌನಾಚರಣೆ ನಡೆಸಲಾಯಿತು. ಪೊಲೀಸ್ ಇಲಾಖೆಯ ವಿವಿಧ ವಿಭಾಗಗಳ ಸಿಬ್ಬಂದಿ, ನಿವೃತ್ತ ಪೊಲೀಸ್ ಸಿಬ್ಬಂದಿ ಹಾಗೂ ಮಾಧ್ಯಮ ಪ್ರತಿನಿಧಿಗಳು ಉಪಸ್ಥಿತರಿದ್ದು ಹುತಾತ್ಮರಿಗೆ ಗೌರವ ಸಲ್ಲಿಸಿದರು.

NO COMMENTS

LEAVE A REPLY

Please enter your comment!
Please enter your name here

error: Content is protected !!