ಶಿರಸಿ: ಉತ್ತರಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಪಕ್ಷದ ತೀರ್ಮಾನವೇ ಅಂತಿಮವಾಗಿದ್ದು, ಹುದ್ದೆಗಾಗಿ ಸ್ಪರ್ಧಿಸುವುದಾಗಲಿ ಅಥವಾ ಯಾವುದೇ ರೀತಿಯ ಲಾಬಿ ನಡೆಸುವುದಾಗಲಿ ಮಾಡುವುದಿಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದ್ದಾರೆ.
ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ಜುಲೈ 25ರಿಂದ 31ರವರೆಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಹಿನ್ನೆಲೆಯಲ್ಲಿ ಸಂಘಟನಾ ಅಭಿಪ್ರಾಯ ಸಂಗ್ರಹಣೆ ಪ್ರಕ್ರಿಯೆ ಆರಂಭಿಸಿರುವ ಸಂದರ್ಭದಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರಲ್ಲದೆ, ಪಕ್ಷದ ನಾಯಕತ್ವ ಒಮ್ಮತದಿಂದ ಅವಕಾಶ ನೀಡಿದರೆ ಅಧ್ಯಕ್ಷರಾಗಿ ಜವಾಬ್ದಾರಿ ನಿರ್ವಹಿಸಲು ಆಸಕ್ತಿ ಇದೆ ಎಂದೂ ತಿಳಿಸಿದ್ದಾರೆ.
1990ರಲ್ಲಿ ವಿದ್ಯಾರ್ಥಿ ಕಾಂಗ್ರೆಸ್‌ನಿಂದ ರಾಜಕೀಯ ಪಯಣ ಆರಂಭಿಸಿ, ಬಳಿಕ ಜಿಲ್ಲಾ ಯುವ ಕಾಂಗ್ರೆಸ್, ಹಿಂದುಳಿದ ವರ್ಗ ಘಟಕ, ಕಾನೂನು ಘಟಕ ಹಾಗೂ ರಾಜ್ಯ ಕಾನೂನು ಘಟಕದ ಹಿರಿಯ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದು, ಪ್ರಸ್ತುತ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವುದಾಗಿ ವಿವರಿಸಿದರು.
ಪಕ್ಷವು ಇದುವರೆಗೆ ಹಲವು ಜವಾಬ್ದಾರಿಗಳನ್ನು ನೀಡಿದ್ದು, ಅದೇ ನಂಬಿಕೆಯನ್ನು ಮುಂದುವರಿಸಿದರೆ ಅಧ್ಯಕ್ಷರಾಗಿ ಕೆಲಸ ಮಾಡಲು ಸಿದ್ಧನಿದ್ದೇನೆ. 2008ರಲ್ಲಿ ಶಿರಸಿ–ಸಿದ್ದಾಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಪಕ್ಷ ಅವಕಾಶ ನೀಡಿತ್ತು. ನಂತರದ ಅವಧಿಗಳಲ್ಲಿ ವಿಧಾನಸಭೆ, ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಹಾಗೂ ಲೋಕಸಭೆ ಚುನಾವಣೆಗೆ ಪಕ್ಷದ ಅಭ್ಯರ್ಥಿಯಾಗಲು ಸಹ ತಾವು ಅವಕಾಶ ಕೋರಿದ್ದಾಗಿ ತಿಳಿಸಿದ್ದಾರೆ.