ಕಾರವಾರ: ಗಣಪತಿ ಮೂರ್ತಿ ತಯಾರಿಕೆ ಕೇವಲ ಕಲೆಯಲ್ಲ, ಅದು ನಮ್ಮ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಭಾಗವಾಗಿದೆ. ಪರಿಸರಕ್ಕೆ ಹಾನಿಯಾಗದ ಮೂರ್ತಿಗಳ ತಯಾರಿಕೆಯ ಮೂಲಕ ಭಕ್ತಿ ಮತ್ತು ಪರಿಸರ ಕಾಳಜಿಯನ್ನು ಒಟ್ಟಿಗೆ ಕೊಂಡೊಯ್ಯುತ್ತಿರುವ ಕಲಾವಿದರ ಪ್ರಯತ್ನ ಶ್ಲಾಘನೀಯವಾಗಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷೆ ರೂಪಾಲಿ ಎಸ್. ನಾಯ್ಕ ಹೇಳಿದರು.
ಗಣೇಶೋತ್ಸವದ ಹಿನ್ನೆಲೆಯಲ್ಲಿ ಕಾರವಾರ ನಗರದ ಮುರಳೀಧರ ಮಠದ ಪಕ್ಕದಲ್ಲಿರುವ ಇಂದಿರಾಕಾಂತ ಸಭಾಗೃಹದಲ್ಲಿ ರೂಪಾಲಿ ಎಸ್. ನಾಯ್ಕ ಅವರು ಕಾರವಾರದ ಗಣಪತಿ ಮೂರ್ತಿ ಕಲಾವಿದರಿಗೆ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಇಂತಹ ಕಲಾವಿದರಿಗೆ ಪ್ರೋತ್ಸಾಹ ನೀಡುವುದರಿಂದ ಮುಂದಿನ ದಿನಗಳಲ್ಲಿ ಪರಿಸರಸ್ನೇಹಿ ಗಣೇಶೋತ್ಸವಕ್ಕೆ ಮತ್ತಷ್ಟು ಉತ್ತೇಜನ ದೊರೆಯಲಿದೆ ಎಂದು ರೂಪಾಲಿ ನಾಯ್ಕ ಹೇಳಿದರು.
ಸಾಂಪ್ರದಾಯಿಕ ಕಲೆ ಹಾಗೂ ಭಕ್ತಿಭಾವವನ್ನು ಉಳಿಸಿಕೊಂಡು, ಜಲಮೂಲಗಳಿಗೆ ಹಾನಿಯಾಗದಂತೆ ಪರಿಸರಸ್ನೇಹಿ ಮೂರ್ತಿಗಳ ನಿರ್ಮಾಣಕ್ಕೆ ಒತ್ತು ನೀಡುತ್ತಿರುವ ನೂರಾರು ಕಲಾವಿದರ ಸೇವೆಯನ್ನು ಗುರುತಿಸಿ ಈ ಸಂದರ್ಭದಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು.
ವೇದಿಕೆಯಲ್ಲಿ ಕಾರವಾರ ರಾಮಕೃಷ್ಣ ಪರಮಹಂಸ ಮಠದ ಶ್ರೀ ಶ್ರೀ ಶ್ರೀ ಭಾವೇಶಾನಂದ ಸ್ವಾಮೀಜಿ, ಜಗದೀಶ್ ಬಿರರ್ಕುಡಿಕರ್, ಸಂಜಯ್ ಸಾಳಂಕೆ, ನಾಗೇಶ್ ಕುರುಡೇಕರ್, ಸುಭಾಷ್ ಗುನಗಿ, ರವಿರಾಜ್ ಅಂಕೋಲೆಕರ್, ರಾಮ ಬಾಂಧೇಕರ್, ಮದನ್ ಮಡಕೇಕರ್ ಸೇರಿದಂತೆ ನೂರಾರು ಗಣಪತಿ ಮೂರ್ತಿ ಕಲಾವಿದರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.