ಕಾರವಾರ: ಇತ್ತೀಚಿನ ದಿನಗಳಲ್ಲಿ ಜಿಲ್ಲೆಯ ಗ್ರಾಮೀಣ ಪ್ರದೇಶಗಳೆಲ್ಲ ವೃದ್ಧಾಶ್ರಮಗಳಾಗಿಬಿಟ್ಟಿವೆ. ಮಕ್ಕಳೆಲ್ಲ ಒಂದಿಷ್ಟು ಓದಿ ಮಹಾನಗರ, ಪಟ್ಟಣಗಳನ್ನು ಸೇರಿದ್ದರೆ ಮನೆಯಲ್ಲಿ ಮಾತ್ರ ಅದೇ ವಯಸ್ಸಾದ ಅಜ್ಜ-ಅಜ್ಜಿಯರು. ನಾಲ್ಕಾರು ವರ್ಷಗಳೀಚೆಗೆ ಗ್ರಾಮೀಣ ಪ್ರದೇಶವನ್ನೇ ಗುರಿಯಾಗಿಸಿಕೊಂಡು ಗುಜರಿ ಆಯುವವರು, ಚಾದರ, ಕಂಬಳಿ ಮಾರುವವರು, ಗೋಶಾಲೆ, ಅನಾಥಾಶ್ರಮ ಇತ್ಯಾದಿಗಳ ಹೆಸರಲ್ಲಿ ದೇಣಿಗೆ ಸಂಗ್ರಹಿಸುವ ಅಪರಿಚಿತ, ಅಂತಾರಾಜ್ಯ ವ್ಯಕ್ತಿಗಳ ಸಂಚಾರವೂ ಹೆಚ್ಚುತ್ತಿರುವುದು ಕೆಲ ಸಂದರ್ಭಗಳಲ್ಲಿ ಆತಂಕ ಮೂಡಿಸುತ್ತಿದೆ. ಆದರೆ, ಈ ವಿಚಾರದಲ್ಲಿ ಆಡಳಿತವಾಗಲಿ, ಆಯಾ ಪಂಚಾಯಿತಿಗಳಾಗಲಿ ಯಾವುದೇ ಕ್ರಮ ಕೈಗೊಂಡ ಉದಾಹರಣೆಗಳಿಲ್ಲ.
ಹಲವುತಾಲೂಕುಗಳ ಗ್ರಾಮೀಣ ಪ್ರದೇಶಗಳಲ್ಲಿ ಕೇರಿ ಮನೆಗಳಿಗಿಂತ ಒಂಟಿ ಮನೆಗಳೇ ಹೆಚ್ಚು. ಕಗ್ಗಾಡಿನ ಗರ್ಭದಲ್ಲಿ ಒಂದೇ ರಸ್ತೆ, ಒಂದೇ ಮನೆ ಎನ್ನುವ ಪರಿಸ್ಥಿತಿ. ಏನೋ ಅನಾಹುತವಾಗಿ ರಕ್ಷಣೆಗಾಗಿ ಬೊಬ್ಬೆ ಹೊಡೆದರೂ ಇನ್ನೊಂದು ಮನೆಯವರಿಗೆ ಕೇಳಿಸುವುದು ಅಸಾಧ್ಯ. ಒಂದು ರಸ್ತೆ ಹಿಡಿದು ಹೊರಟರೆ ಒಂದೇ ಮನೆ. ಆ ರಸ್ತೆಯಲ್ಲಿ ಯಾರೆಲ್ಲ ಓಡಾಡಿದರು ಎಂಬುದು ಯಾರಿಗೂ ತಿಳಿಯದು.
ಹೀಗಿರುವಾಗಲೇ, ಅನಾಥಾಶ್ರಮ/ವೃದ್ಧಾಶ್ರಮದಲ್ಲಿ ನಿತ್ಯ ಇಂತಿಷ್ಟು ಜನರ ಹೊಟ್ಟೆ ಹೊರೆಯುತ್ತಿದ್ದೇವೆ, ಗೋಶಾಲೆ ನಿರ್ವಹಿಸುತ್ತಿದ್ದು, ಗೋವುಗಳ ಮೇವಿಗೆ ನೆರವು ನೀಡಿ ಎನ್ನುತ್ತ ಗ್ರಾಮೀಣ ಪ್ರದೇಶಗಳಲ್ಲಿ ಓಡಾಡುವವರ ಸಂಖ್ಯೆ ಹೆಚ್ಚುತ್ತಿದೆ. ಮೊದಮೊದಲೆಲ್ಲ ಇರಬಹುದು ಎನ್ನುತ್ತ ಮನೆ ಬಾಗಿಲಿಗೆ ಬಂದವರನ್ನು ಬರಿಗೈಲಿ ಕಳಿಸುವುದೇಕೆ ಎಂದು ಐವತ್ತೋ ನೂರೋ ಕೊಟ್ಟು ಕಳಿಸುತ್ತಿದ್ದರಾದರೂ, ಇತ್ತೀಚೆಗೆ ಈ ಅಪರಿಚಿತರ ನಡೆ ಅನುಮಾನ ಮೂಡಿಸತೊಡಗಿದೆ.
ಇದರೊಂದಿಗೆ, ಬೇರೆ ಬೇರೆ ರಾಜ್ಯಗಳ ನೋಂದಣಿಯ ಬೈಕ್‌ಗಳಲ್ಲಿ ಕಂಬಳಿ, ಚಾದರ, ಬೆಡ್ ಇತ್ಯಾದಿಗಳನ್ನು ಕಟ್ಟಿಕೊಂಡು ವ್ಯವಹಾರಕ್ಕೆ ಬರುವವರೂ ಅಷ್ಟೇ ಇದ್ದಾರೆ. ದಿನ ನೋಡಿ ಬರುವವರಂತೆ ಮಲೆನಾಡಿನ ಅಡಿಕೆ ಕೊಯ್ಲಿನ ಸಮಯವನ್ನೇ ನೋಡಿ ಬರುವ ಇವರೆಲ್ಲಿ ಕೆಲವರು ಅಂಗಳದಲ್ಲಿ ಒಣಗಲು ಇಟ್ಟಿದ್ದ ಅಡಿಕೆಯನ್ನೂ ಕದ್ದೊಯ್ದ ಪ್ರಕರಣಗಳು ನಡೆದಿದ್ದಿದೆ.
ಈ ಬಗ್ಗೆ ಪೊಲೀಸ್ ಇಲಾಖೆಯ ಸಿಬ್ಬಂದಿಗಳಿಗೆ ತಿಳಿಸಿದರೆ ಅಂತಹ ಅಪರಿಚಿತರ ಫೋಟೋ ತೆಗೆದುಕೊಳ್ಳಿ, ಅವರ ಐಡಿ ಕಾರ್ಡ್ ಕೇಳಿ ಫೋಟೋ ತೆಗೆದುಕೊಳ್ಳಿ ಎನ್ನುತ್ತಾರೆ. ಇದು ಸಾಧ್ಯವೇ? ಅಲ್ಲಿಯವರೆಗೂ ಆ ಅಪರಿಚಿತರು ನಿಂತಾರೆಯೇ ಎಂಬುದು ಪ್ರಶ್ನೆ. ಅನಾಹುತಗಳು ಸಂಭವಿಸುವ ಮೊದಲೇ ಈ ವಿಚಾರದಲ್ಲಿ ಸೂಕ್ತ ಕ್ರಮ ಕೈಗೊಳ್ಳುವ ಅಗತ್ಯವಿದೆ.
ಆತ್ಮೀಯರೇ, ಇಂತಹ ಅದೆಷ್ಟೋ ಸಮಸ್ಯೆಗಳು ನಿಮ್ಮ ಗಮನಕ್ಕೂ ಬಂದಿರಬಹುದು. ಇದರ ಬಗ್ಗೆ ಕೆನರಾ ನೆಕ್ಸ್ಟ್ ಗಮನಕ್ಕೆ ತನ್ನಿ. ಇಲ್ಲಿ ಓದುಗರೇ ವರದಿಗಾರರು. ನಿಮ್ಮ ಸುತ್ತಲಿನ ಸಾರ್ವಜನಿಕ ಸಮಸ್ಯೆಗಳು, ಆಡಳಿತದ ಕುಂದುಕೊರತೆಗಳು, ಮಾನವೀಯ ಕಥೆಗಳು ಎಲ್ಲಕ್ಕೂ ಇಲ್ಲಿ ಆದ್ಯತೆ ಇದೆ.