Friday, October 23, 2026
HomeLocal Newsಹೋರಾಟಗಳಲ್ಲಿ ಸೋತಿರಬಹುದು, ಆದರೆ ಸತ್ತಿಲ್ಲ

ಹೋರಾಟಗಳಲ್ಲಿ ಸೋತಿರಬಹುದು, ಆದರೆ ಸತ್ತಿಲ್ಲ

ಯಲ್ಲಾಪುರ: ನಾನು ಬದುಕಿದರೆ ಆಯಿತು, ಮುಂದಿನದು ಹೇಗಾದರೂ ಆಗಲಿ ಎನ್ನುವ ಋಣಾತ್ಮಕ ಧೋರಣೆ ಕೆಲವು ಜನಪ್ರತಿನಿಧಿಗಳಲ್ಲಿದೆ. ಸುಸ್ಥಿರ ಅಭಿವೃದ್ಧಿಯ ಮೂಲಕ ಯೋಜನೆಗಳನ್ನು ರೂಪಿಸಿದರೆ ಜನರಿಗೂ ಅನುಕೂಲವಾಗಬೇಕು, ಪರಿಸರಕ್ಕೂ ಹಾನಿಯಾಗಬಾರದು ಎಂದು ವಿಧಾನ ಪರಿಷತ್ತಿನ ಮಾಜಿ ಸದಸ್ಯ ಶಾಂತಾರಾಮ ಸಿದ್ದಿ ಹೇಳಿದರು.

ತಾಲೂಕಿನ ಉಪಳೇಶ್ವರದಲ್ಲಿ ಬೇಡ್ತಿ–ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಹಾಗೂ ರಾಷ್ಟ್ರೀಯ ಹೆದ್ದಾರಿ ತಡೆ ಸಂಚಾಲನಾ ಸಮಿತಿ ವತಿಯಿಂದ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು.

ಬೇಡ್ತಿ–ಅಘನಾಶಿನಿ ನದಿ ತಿರುವು ಯೋಜನೆ ಬೇಡ ಎನ್ನುವವರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ, ಯೋಜನೆ ಬೇಕು ಎನ್ನುವವರೂ ಇದ್ದಾರೆ. ಎಲ್ಲರನ್ನೂ ಒಗ್ಗೂಡಿಸಿ ಹೋರಾಟವನ್ನು ಬಲಪಡಿಸಬೇಕಿದೆ. ಯೋಜನೆಯಿಂದ ಉಂಟಾಗಬಹುದಾದ ಅಪಾಯಗಳು ಮತ್ತು ಹಾನಿಯ ಬಗ್ಗೆ ಜನರು ಸಮಗ್ರವಾಗಿ ತಿಳಿದುಕೊಳ್ಳಬೇಕು.

ಯೋಜನೆ ಕಾರ್ಯಗತಗೊಳಿಸಿದರೂ ಅದು ಪೂರ್ಣಗೊಳ್ಳದೆ ಅರ್ಧದಲ್ಲೇ ನಿಂತು ಹಳ್ಳ ಹಿಡಿಯುವ ಸಾಧ್ಯತೆಯಿದೆ. ಇದಕ್ಕೆ ಹಿಂದಿನ ಯೋಜನೆಗಳ ನಿದರ್ಶನಗಳಿವೆ. ಆದ್ದರಿಂದ ಜನರು ಒಗ್ಗಟ್ಟಿನಿಂದ ಯೋಜನೆಯನ್ನು ವಿರೋಧಿಸಬೇಕು ಎಂದು ಕರೆ ನೀಡಿದರು.

ಪರಿಸರಕ್ಕೆ ಮಾರಕವಾಗುವ ಯೋಜನೆಗಳ ವಿರುದ್ಧದ ಹೋರಾಟದಲ್ಲಿ ಕೆಲವೊಮ್ಮೆ ಸೋತಿರಬಹುದು. ಆದರೆ, ಸತ್ತಿಲ್ಲ. ಮತ್ತೆ ಮತ್ತೆ ಹೋರಾಟ ನಡೆಸೋಣ. ಒಂದಲ್ಲ ಒಂದು ದಿನ ಗೆದ್ದೇ ಗೆಲ್ಲುತ್ತೇವೆ ಎಂಬ ವಿಶ್ವಾಸವನ್ನು ಶಾಂತಾರಾಮ ಸಿದ್ದಿ ವ್ಯಕ್ತಪಡಿಸಿದರು.

ಸಮಿತಿಯ ಪ್ರಧಾನ ಸಂಚಾಲಕ ಹರಿಪ್ರಕಾಶ ಕೋಣೆಮನೆ ಹೋರಾಟದ ಮುಂದಿನ ನಡೆಗಳ ಕುರಿತು ವಿವರಿಸಿದರು. ವೆಂಕಟರಮಣ ಭಟ್ ಕಿರಕುಂಭತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಬ್ಬಣ್ಣ ದಾನ್ಯಾನಕೊಪ್ಪ ಸ್ವಾಗತಿಸಿದರು. ಗೋಪಣ್ಣ ಬಾಳೆಗೆದ್ದೆ ವಂದಿಸಿದರು.

ಸಭೆಯಲ್ಲಿ ರಸ್ತೆ ತಡೆ ಸಂಚಾಲನಾ ಸಮಿತಿ ಅಧ್ಯಕ್ಷ ನಾರಾಯಣ ಭಟ್ ಅಗ್ಗಾಶಿಕುಂಬ್ರಿ, ಬೇಡ್ತಿ–ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯ ಸಂಚಾಲಕ ನರಸಿಂಹ ಸಾತೊಡ್ಡಿ, ರಸ್ತೆ ತಡೆ ಸಂಚಾಲನಾ ಸಮಿತಿಯ ಸಂಚಾಲಕರಾದ ರಾಘು ಭಟ್, ರಾಘವೇಂದ್ರ ಭಟ್ ಹಾಸಣಗಿ, ಎಂ.ಎಸ್. ಹೆಗಡೆ ಜಂಬೆಸಾಲ, ದತ್ತಾತ್ರೇಯ ಭಟ್, ಸುಬ್ಬಣ್ಣ ಉದ್ದಾಬೈಲ, ನಾಗೇಶ್ ಭಟ್ ಅಂಬುಳ್ಳಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

Recent Comments

error: Content is protected !!
Share