ಶಿರಸಿ: ಕ್ಷೇತ್ರದ ಪ್ರತಿಯೊಂದು ಬಡಾವಣೆ ಹಾಗೂ ಹಳ್ಳಿಗಳಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವುದು ಮೊದಲ ಆದ್ಯತೆಯಾಗಿದ್ದು, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಭೀಮಣ್ಣ ಟಿ. ನಾಯ್ಕ ಹೇಳಿದರು.
ಕಸ್ತೂರಬಾ ನಗರದ ಶಾಲ್ಮಲಾ ಬಡಾವಣೆಯಲ್ಲಿ ರಸ್ತೆ ಹಾಗೂ ಚರಂಡಿ ಸೇರಿದಂತೆ ವಿವಿಧ ಮೂಲಸೌಕರ್ಯಗಳ ಸಮಸ್ಯೆ ಕುರಿತು ಸ್ಥಳೀಯರ ಅಹವಾಲು ಆಲಿಸಿದ ಬಳಿಕ ಅವರು ಮಾತನಾಡಿದರು.
ಶಾಲ್ಮಲಾ ಬಡಾವಣೆಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಶಾಸಕರು, ಸ್ಥಳದಲ್ಲಿಯೇ ರಸ್ತೆ, ಚರಂಡಿ ಸೇರಿದಂತೆ ಬಡಾವಣೆಯ ಮೂಲಸೌಕರ್ಯಗಳ ಸ್ಥಿತಿಯನ್ನು ಪರಿಶೀಲಿಸಿದರು. ಈ ವೇಳೆ ಸ್ಥಳೀಯ ನಿವಾಸಿಗಳು ತಮ್ಮ ಸಮಸ್ಯೆಗಳನ್ನು ಶಾಸಕರ ಗಮನಕ್ಕೆ ತಂದರು.
ಸುಸಜ್ಜಿತ ರಸ್ತೆ ಹಾಗೂ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಮಳೆಗಾಲದಲ್ಲಿ ಮಾತ್ರವಲ್ಲದೆ, ನಿತ್ಯ ಸಂಚಾರಕ್ಕೂ ತೊಂದರೆಯಾಗುತ್ತಿದೆ. ಹೀಗಾಗಿ ಬಡಾವಣೆಯಲ್ಲಿ ರಸ್ತೆ ಮತ್ತು ಚರಂಡಿ ನಿರ್ಮಿಸಿಕೊಡುವಂತೆ ನಿವಾಸಿಗಳು ಮನವಿ ಮಾಡಿದರು.
ಸ್ಥಳೀಯರ ಮನವಿಗೆ ಸ್ಪಂದಿಸಿದ ಶಾಸಕ ಭೀಮಣ್ಣ ನಾಯ್ಕ, ರಸ್ತೆ ಹಾಗೂ ಚರಂಡಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ತಕ್ಷಣ ಯೋಜನಾ ವರದಿ ಸಿದ್ಧಪಡಿಸಿ, ಯಾವುದೇ ವಿಳಂಬವಿಲ್ಲದೆ ಅಗತ್ಯ ಕಾಮಗಾರಿ ಆರಂಭಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಗುಣಮಟ್ಟದ ಕಾಮಗಾರಿ ಕೈಗೊಳ್ಳುವಂತೆಯೂ ತಿಳಿಸಿದರು.
ಈ ಸಂದರ್ಭದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ಬಡಾವಣೆಯ ಪ್ರಮುಖರು ಹಾಗೂ ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು.


