ಸಿದ್ದಾಪುರ: ಕೆಎಸ್‌ಆರ್‌ಟಿಸಿ ಬಸ್‌ಗೆ ದಾರಿ ಬಿಡುವ ವಿಚಾರದಲ್ಲಿ ಚಾಲಕನೊಂದಿಗೆ ಜಗಳ ತೆಗೆದು, ಬಳಿಕ ಬಸ್ ನಿಲ್ಲಿಸಿ ಕಂಡಕ್ಟರ್ ಹಾಗೂ ಚಾಲಕನ ಮೇಲೆ ಹಲ್ಲೆ ನಡೆಸಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಮೂವರನ್ನು ಸಿದ್ದಾಪುರ ಪೊಲೀಸರು ಬಂಧಿಸಿದ್ದಾರೆ.
ಶಿರಸಿ ತಾಲೂಕಿನ ಕಾನಗೋಡದ ಭಾಸ್ಕರ ಪಟಗಾರ (49) ಕೆಎಸ್‌ಆರ್‌ಟಿಸಿ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಅ.1ರಂದು ರಾತ್ರಿ ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಪ್ರಕಾರ, ಸಂದೀಪ ವಾಲ್ಮೀಕಿ, ಸೈಪ್ ಅಲಿ ಸೈಯದ್ ಹಾಗೂ ಹರ್ಷವರ್ಧನ ಕೃಷ್ಣ ನಾಯ್ಕ ಎಂಬುವರು ಓಮಿನಿ ವಾಹನದಲ್ಲಿ ತೆರಳುತ್ತಿದ್ದ ವೇಳೆ ಕೆಎಸ್‌ಆರ್‌ಟಿಸಿ ಬಸ್‌ಗೆ ದಾರಿ ಬಿಡದೆ ಮುಂದೆ ಹೋಗಿ ಬಳಿಕ ದಾರಿ ಬಿಟ್ಟ ವಿಚಾರವಾಗಿ ಚಾಲಕನೊಂದಿಗೆ ಜಗಳ ತೆಗೆದಿದ್ದರು ಎನ್ನಲಾಗಿದೆ.
ಇದೇ ವಿಚಾರಕ್ಕೆ ಸಿಟ್ಟುಕೊಂಡ ಆರೋಪಿಗಳು ಬಸ್‌ನ್ನು ಅಡ್ಡಗಟ್ಟಿ ತಡೆದು, ಚಾಲಕನನ್ನು ಉದ್ದೇಶಿಸಿ ಅವಾಚ್ಯವಾಗಿ ಮಾತನಾಡಿ ಜಗಳ ನಡೆಸಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ಬಳಿಕ ಸಿದ್ದಾಪುರ ತಾಲೂಕಿನ ನಾಣಿಕಟ್ಟಾ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಇಳಿಸುತ್ತಿದ್ದ ವೇಳೆ ಆರೋಪಿಗಳು ಮತ್ತೆ ಅಲ್ಲಿಗೆ ಬಂದಿದ್ದು, ಬಸ್‌ನ ಕಂಡಕ್ಟರ್ ಗಣೇಶ ಉಪೇಂದ್ರ ನಾಯ್ಕ (48) ಅವರನ್ನು ಸಂದೀಪ ಬಸ್‌ನಿಂದ ಕೆಳಗೆ ಎಳೆದು ಉಳಿದ ಆರೋಪಿಗಳೊಂದಿಗೆ ಸೇರಿ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಗಳ ಬಿಡಿಸಲು ಮುಂದಾದ ಚಾಲಕ ಭಾಸ್ಕರ ಪಟಗಾರ ಅವರ ಮೇಲೂ ಸಂದೀಪ ಕಬ್ಬಿಣದ ಜಾಕ್‌ನಿಂದ ತಲೆಗೆ ಹೊಡೆಯಲು ಮುಂದಾಗಿದ್ದು, ಚಾಲಕ ತಪ್ಪಿಸಿಕೊಂಡ ಪರಿಣಾಮ ಜಾಕ್‌ನ ಏಟು ಬಲಗೈ ಬೆರಳಿಗೆ ಬಿದ್ದು ಗಾಯವಾಗಿದೆ. ಸೈಪ್ ಅಲಿ ಸೈಯದ್ ಚಾಲಕನ ಮುಖಕ್ಕೆ ಕೈಯಿಂದ ಗುದ್ದಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಇದೇ ವೇಳೆ ಸಂದೀಪ ಕಂಡಕ್ಟರ್ ಗಣೇಶ ನಾಯ್ಕ ಅವರ ಬಲಭುಜಕ್ಕೂ ಕಬ್ಬಿಣದ ಜಾಕ್‌ನಿಂದ ಹೊಡೆದು ನೋವುಂಟು ಮಾಡಿದ್ದಾನೆ. ಬಳಿಕ ಆರೋಪಿಗಳು ಚಾಲಕ ಮತ್ತು ಕಂಡಕ್ಟರ್‌ಗೆ ಜೀವ ಬೆದರಿಕೆ ಹಾಕಿ, ಸರ್ಕಾರಿ ಕರ್ತವ್ಯ ನಿರ್ವಹಿಸದಂತೆ ಅಡ್ಡಿಪಡಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿತ್ತು.
ಆರೋಪಿಗಳ ಪತ್ತೆಗಾಗಿ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್., ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಜಿ. ಹಾಗೂ ಶಿರಸಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕಿ ಗೀತಾ ಪಾಟೀಲ್ ಅವರ ಮಾರ್ಗದರ್ಶನದಲ್ಲಿ ಸಿದ್ದಾಪುರ ಠಾಣೆ ಪಿಐ ಜೆ.ಬಿ. ಸೀತಾರಾಮ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಪಿಎಸ್‌ಐಗಳಾದ ನಾಗಪ್ಪ, ಶಾಂತಿನಾಥ ಕೆ. ಪಾಸಾನೆ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಪೊಲೀಸ್ ತಂಡ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಘಟನೆ ನಡೆದ 24 ಗಂಟೆಗಳೊಳಗೆ ಮೂವರು ಆರೋಪಿಗಳನ್ನು ಪತ್ತೆ ಮಾಡಿ ವಶಕ್ಕೆ ಪಡೆದು ಬಂಧಿಸಿದೆ. ಬಳಿಕ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಕಾರ್ಯಾಚರಣೆಯಲ್ಲಿ ರಮೇಶ ಎಸ್. ಗೌಡ, ಸುಭಾಶ ಬಿ. ನಾಯ್ಕ, ರಮೇಶ ಸಿ. ಕೂಡಲ, ಮಂಜಪ್ಪ ಟಿ., ರಾಘವೇಂದ್ರ, ಚೇತನ ಹಲಗೇರಿ, ರಾಜು ಎಂ., ಗಿರೀಶಯ್ಯ, ಸಂದೀಪ ನಾಯ್ಕ, ಅಭಿಜಿತ್ ಹಾಗೂ ಸಂತೋಷ ಮಲ್ಲೂರು ಭಾಗವಹಿಸಿದ್ದರು.
ಸಂತೋಷ ತಳವಾರ, ಚಂದ್ರಶೇಖರ ನಾಯ್ಕ, ನಾಗರಾಜ ತಿಮ್ಮಾಪುರ, ರವಿ ಕ್ಯಾಲಕೊಂಡ ಹಾಗೂ ವಿನಾಯಕ್ ಮಡಿವಾಳ ತನಿಖೆಗೆ ಸಹಕರಿಸಿದ್ದಾರೆ. ಸಿದ್ದಾಪುರ ಪೊಲೀಸರ ಕಾರ್ಯಾಚರಣೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.


