Friday, March 13, 2026
HomeLocal Newsಪಿಗ್ಮಿ ಕಲೆಕ್ಟರ್ ಗೀತಾ ಹುಂಡೇಕರ ಕೊಲೆ ಪ್ರಕರಣ: ಆರೋಪಿಗೆ ಜೀವಾವಧಿ ಶಿಕ್ಷೆ

ಪಿಗ್ಮಿ ಕಲೆಕ್ಟರ್ ಗೀತಾ ಹುಂಡೇಕರ ಕೊಲೆ ಪ್ರಕರಣ: ಆರೋಪಿಗೆ ಜೀವಾವಧಿ ಶಿಕ್ಷೆ

ಕಾರವಾರ: ಸಿದ್ಧಾಪುರದ ವಿನಾಯಕ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಪಿಗ್ಮಿ ಕಲೆಕ್ಟರ್ ಗೀತಾ ಪ್ರಭಾಕರ ಹುಂಡೇಕರ ಕೊಲೆ ಪ್ರಕರಣದಲ್ಲಿ ಆರೋಪಿತ ಅಭಿಜಿತ ಗಣಪತಿ ಮಡಿವಾಳ ವಿರುದ್ಧದ ಆರೋಪಗಳು ರುಜುವಾತಾಗಿದ್ದು, ಶಿರಸಿಯ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಜೊತೆಗೆ ರೂ.32,000 ದಂಡ ಹಾಗೂ ಮೃತಳ ಅವಲಂಬಿತರಾದ ಮಕ್ಕಳಿಗೆ ರೂ.50,000 ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿದೆ. ಜಿಲ್ಲಾ ಉಚಿತ ಕಾನೂನು ಪ್ರಾಧಿಕಾರದಿಂದಲೂ ಪರಿಹಾರ ಪಡೆಯಬಹುದೆಂದು ನ್ಯಾಯಾಧೀಶ ಕಿರಣ ಕಿಣಿ ತೀರ್ಪಿನಲ್ಲಿ ತಿಳಿಸಿದ್ದಾರೆ.

ಪ್ರಕರಣದ ಹಿನ್ನೆಲೆ

ಗೀತಾ ಪ್ರಭಾಕರ ಹುಂಡೇಕರ ಸಿದ್ದಾಪುರ ಪಟ್ಟಣ ಪಂಚಾಯತ್ ವ್ಯಾಪ್ತಿಯ ಸೊರಬ ರಸ್ತೆಯ ಬಸವನಗಲ್ಲಿ (ವಾರ್ಡ್ ನಂ. 9) ಮನೆ ನಂ. 56ರಲ್ಲಿ ಒಬ್ಬರೇ ವಾಸವಾಗಿದ್ದು, ಸಿದ್ದಾಪುರದ ವಿನಾಯಕ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಲ್ಲಿ ಪಿಗ್ಮಿ ಕಲೆಕ್ಟರ್ ಆಗಿ ಕೆಲಸ ಮಾಡುತ್ತಿದ್ದರು. ಪ್ರತಿದಿನ ಕಾಲ್ನಡಿಗೆಯಿಂದ ಪಟ್ಟಣದಲ್ಲಿ ಪಿಗ್ಮಿ ಹಣ ಸಂಗ್ರಹಿಸುತ್ತಿದ್ದರು.

ಆರೋಪಿತ ಅಭಿಜಿತ ಗಣಪತಿ ಮಡಿವಾಳ, ಮೃತಳು ಮನೆದಲ್ಲಿ ಒಬ್ಬಳೇ ವಾಸಿಸುತ್ತಿದ್ದು ಪಿಗ್ಮಿ ಹಣ ಸಂಗ್ರಹಿಸುತ್ತಿದ್ದಾಳೆ ಎಂಬ ಮಾಹಿತಿ ತಿಳಿದು, ದಿ. 23-12-2024ರಂದು ರಾತ್ರಿ ಸುಮಾರು 10.15ರ ವೇಳೆಗೆ ಮನೆಯ ಹಿಂಭಾಗದ ಮೇಲ್ಛಾವಣಿ ಹಂಚನ್ನು ತೆಗೆದು ಒಳನುಗ್ಗಿ, ಕುತ್ತಿಗೆ ಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ ಎಂದು ತನಿಖೆಯಲ್ಲಿ ಬಹಿರಂಗವಾಗಿದೆ.

ಕೊಲೆ ಬಳಿಕ, ಮೃತಳ ಕಿವಿಯಲ್ಲಿ ಧರಿಸಿದ್ದ ಹರುಳುಗಳಿದ್ದ ಬಂಗಾರದ ಕಿವಿಯೋಲೆ ಜೋಡಿ, ರೋಲ್ಡ್ ಗೋಲ್ಡ್ ಬಳೆಗಳು ಎರಡು ಹಾಗೂ ಪಿಗ್ಮಿಯಿಂದ ಸಂಗ್ರಹಿಸಿದ ಒಟ್ಟು ರೂ.21,680 ಹಣವನ್ನು ಕಳವು ಮಾಡಿದ್ದಾನೆ ಎಂಬುದು ಆರೋಪವಾಗಿದೆ.

ತನಿಖೆ ಮತ್ತು ವಾದ

ಸಿದ್ದಾಪುರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಜೆ.ಬಿ. ಸೀತಾರಾಮ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪತ್ರ ಸಲ್ಲಿಸಿದ್ದರು. ಎಎಸ್‌ಐ ಗಣಪತಿ ಭಂಟ್ ಸಾಕ್ಷಿದಾರರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಲ್ಲಿ ಸಹಕರಿಸಿದ್ದರು.

ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ರಾಜೇಶ್ ಎಂ. ಮಳಗಿಕರ್ ಸುದೀರ್ಘ ವಾದ ಮಂಡಿಸಿ, ಪ್ರಕರಣದ ಗಂಭೀರತೆಯನ್ನು ಒತ್ತಿಹೇಳಿ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಮನವಿ ಮಾಡಿದ್ದರು. ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ನ್ಯಾಯಾಲಯ, ಆರೋಪಿತನ ವಿರುದ್ಧದ ಅಪರಾಧ ರುಜುವಾತಾಗಿರುವುದಾಗಿ ತೀರ್ಮಾನಿಸಿ ಜೀವಾವಧಿ ಶಿಕ್ಷೆ ವಿಧಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share