Saturday, May 30, 2026
HomeStateಸಭಾತ್ಯಾಗ ಮಾಡಿದ ಸ್ಪೀಕರ್!

ಸಭಾತ್ಯಾಗ ಮಾಡಿದ ಸ್ಪೀಕರ್!

ಬೆಂಗಳೂರು: ವಿಧಾನಸಭೆಯಲ್ಲಿ ವಿರೋಧ ಪಕ್ಷಗಳು ಪ್ರತಿಭಟನೆ ನಡೆಸಿ ಸಭಾತ್ಯಾಗ ಮಾಡುವುದು ಸಾಮಾನ್ಯ. ಆದರೆ ಈ ಬಾರಿ ಅಪರೂಪದ ಘಟನೆ ನಡೆದಿದೆ. ಸಚಿವರ ಗೈರುಹಾಜರಿ ಮತ್ತು ಸಮರ್ಪಕ ಉತ್ತರಗಳ ಕೊರತೆಯಿಂದ ಅಸಮಾಧಾನಗೊಂಡ ಸ್ಪೀಕರ್‌ ಸ್ವತಃ ಸದನದಿಂದ ಹೊರ ನಡೆದ ಪ್ರಸಂಗ ಗಮನ ಸೆಳೆದಿದೆ.

ಯು.ಟಿ. ಖಾದರ್ ಅವರ ಅಧ್ಯಕ್ಷತೆಯಲ್ಲಿ ನಡೆಯುತ್ತಿದ್ದ ವಿಧಾನಸಭೆ ಕಲಾಪದಲ್ಲಿ ಈ ಅಪರೂಪದ ಘಟನೆ ನಡೆದಿದೆ. ಗೃಹ ಸಚಿವ ಜಿ. ಪರಮೇಶ್ವರ ಅವರು ಲಿಖಿತ ರೂಪದ 230 ಪ್ರಶ್ನೆಗಳ ಪೈಕಿ 84 ಪ್ರಶ್ನೆಗಳಿಗೆ ಉತ್ತರ ನೀಡುತ್ತಿದ್ದರು. ಈ ವೇಳೆ ವಿಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದವು.

ಸದನ ಆರಂಭವಾದಾಗಿನಿಂದಲೂ ಸಚಿವರಿಂದ ಸರಿಯಾದ ಉತ್ತರ ಬರುತ್ತಿಲ್ಲ ಎಂದು ಆರೋಪಿಸಿ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌  ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭ ಸ್ಪೀಕರ್‌ ಖಾದರ್‌ ಅವರು ಸಚಿವರ ಗೈರುಹಾಜರಿ ಹಾಗೂ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡದಿರುವುದನ್ನು ಗಂಭೀರವಾಗಿ ತೆಗೆದುಕೊಂಡರು. ಸದನದಲ್ಲಿ ಶಾಸಕರು ಪ್ರಶ್ನೆ ಕೇಳುತ್ತಾರೆ. ಎಲ್ಲವೂ ಚುಕ್ಕೆ ಗುರುತಿನ ಪ್ರಶ್ನೆಗಳಾಗುವುದಿಲ್ಲ. ಚುಕ್ಕೆ ಗುರುತಿಲ್ಲದ ಪ್ರಶ್ನೆಗಳೂ ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತವೆ. ಗಮನ ಸೆಳೆಯುವ ಸೂಚನೆಗೂ ಸಚಿವರು ಉತ್ತರ ನೀಡುತ್ತಿಲ್ಲ.

ಮೂರು ಸಲ ಹೇಳಿದರೂ ಸುಧಾರಣೆ ಕಂಡು ಬರುತ್ತಿಲ್ಲ. ಸಂಬಂಧಿಸಿದ ಸಚಿವರು ಬಂದು ಸ್ಪಷ್ಟನೆ ನೀಡುವವರೆಗೂ ನಾನು ಸದನ ನಡೆಸುವುದಿಲ್ಲ ಎಂದು ಗರಂ ಆಗಿ ಹೇಳಿ ಅವರು ಕಲಾಪದಿಂದ ಹೊರ ನಡೆದರು.

ಸ್ಪೀಕರ್‌ ಹೊರ ನಡೆದ ನಂತರ ಅವರ ಕೊಠಡಿಯಲ್ಲಿ ತುರ್ತು ಸಭೆ ನಡೆಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರು ಹಾಗೂ ವಿರೋಧ ಪಕ್ಷದ ನಾಯಕರು ಖಾದರ್‌ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. ಸದನವನ್ನು ಸಮರ್ಪಕವಾಗಿ ನಡೆಸಲು ಸಚಿವರು ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡದಿರುವುದಕ್ಕೆ ಗಂಭೀರವಾಗಿ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಸಂಬಂಧಿತ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಿದರು.

ಅದರಂತೆ ಮೂವರು ಅಧಿಕಾರಿಗಳನ್ನು ಅಮಾನತು ಮಾಡಲು ಆದೇಶ ನೀಡಲಾಗಿದ್ದು, ಹೆಚ್ಚು ಉತ್ತರ ಬಾಕಿ ಉಳಿಸಿಕೊಂಡಿರುವ ಇಲಾಖೆ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.

ಸಿಎಂ ಸೂಚನೆಯ ಬಳಿಕ ಸ್ಪೀಕರ್‌ ಯು.ಟಿ. ಖಾದರ್‌ ಅವರು ಮತ್ತೆ ಸದನ ನಡೆಸಲು ಒಪ್ಪಿಕೊಂಡರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share