Tuesday, October 27, 2026
HomeLocal Newsಕಲೆಯ ನಂಟು ನೆಮ್ಮದಿಯ ಬದುಕಿಗೆ ದಾರಿ: ಶ್ರೀ ಮಾರುತಿ ಗುರೂಜಿ

ಕಲೆಯ ನಂಟು ನೆಮ್ಮದಿಯ ಬದುಕಿಗೆ ದಾರಿ: ಶ್ರೀ ಮಾರುತಿ ಗುರೂಜಿ

ಯಕ್ಷಪೂರ್ಣಿಮೆ ಸಮಾರೋಪ | ಸುಬ್ರಹ್ಮಣ್ಯ ಹೆಗಡೆ ಚಿಟ್ಟಾಣಿಯವರಿಗೆ ‘ಯಕ್ಷಾಂಜನೇಯ’ ಪ್ರಶಸ್ತಿ

ಹೊನ್ನಾವರ: ಯಕ್ಷಗಾನ ಕ್ಷೇತ್ರದಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿರುವ ಹಿರಿಯ ಕಲಾವಿದ ಸುಬ್ರಹ್ಮಣ್ಯ ಹೆಗಡೆ ಚಿಟ್ಟಾಣಿಯವರಿಗೆ ಶ್ರೀಕ್ಷೇತ್ರ ಬಂಗಾರಮಕ್ಕಿಯ ಪ್ರತಿಷ್ಠಿತ ‘ಯಕ್ಷಾಂಜನೇಯ’ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ಶ್ರೀಕ್ಷೇತ್ರ ಬಂಗಾರಮಕ್ಕಿಯಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಆಯೋಜಿಸಿದ್ದ ‘ಯಕ್ಷಪೂರ್ಣಿಮೆ–2026’ ಯಕ್ಷಗಾನ ಕಾರ್ಯಕ್ರಮದ ಸಮಾರೋಪ ಸಮಾರಂಭ ಅ.26ರಂದು ಶ್ರೀ ವೀರಾಂಜನೇಯ ಸಭಾಂಗಣದಲ್ಲಿ ನಡೆಯಿತು. ಕ್ಷೇತ್ರದ ಧರ್ಮಾಧಿಕಾರಿ ಶ್ರೀ ಮಾರುತಿ ಗುರೂಜಿಯವರ ದಿವ್ಯ ಸಾನ್ನಿಧ್ಯ ಹಾಗೂ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ದಿವಂಗತ ವೇ.ಬ್ರ. ಗಣೇಶ ಭಟ್ಟರ ಸ್ಮರಣಾರ್ಥ ನೀಡಲಾಗುವ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸುಬ್ರಹ್ಮಣ್ಯ ಹೆಗಡೆ ಚಿಟ್ಟಾಣಿಯವರು, ತಮ್ಮ ಬದುಕಿನಲ್ಲಿ ತಂದೆಯ ಸಮಾನ ಸ್ಥಾನ ಹೊಂದಿದ್ದವರು ಬಂಗಾರಮಕ್ಕಿ ಕ್ಷೇತ್ರದ ಸಂಸ್ಥಾಪಕ ದಿವಂಗತ ಗಣೇಶ ಭಟ್ಟರು. ಜೀವನ ನಿರ್ವಹಣೆಗೆ ಕಷ್ಟ ಎದುರಾದ ಸಂದರ್ಭದಲ್ಲಿ ಅವರು ನೆರವಾಗಿದ್ದರು. ಅವರ ಆಶೀರ್ವಾದದಿಂದ ಸಾಲಿಗ್ರಾಮ ಮೇಳಕ್ಕೆ ಸೇರಿದ ಬಳಿಕ ಜೀವನದಲ್ಲಿ ದೇವರ ಅನುಗ್ರಹದಿಂದ ಮುನ್ನಡೆಯಲು ಸಾಧ್ಯವಾಯಿತು ಎಂದರು.

ತಮ್ಮ ಸುದೀರ್ಘ ಯಕ್ಷಗಾನ ವೃತ್ತಿಜೀವನಕ್ಕೆ ವೀರಾಂಜನೇಯ ಸ್ವಾಮಿಯೇ ಚೈತನ್ಯ ನೀಡಿದ್ದಾನೆ. ವಯಸ್ಸಿನ ಮಿತಿಗಳ ನಡುವೆಯೂ ಪಾತ್ರಗಳಿಗೆ ಜೀವ ತುಂಬುವ ಶಕ್ತಿಯನ್ನು ದೇವರು ನೀಡುತ್ತಿದ್ದಾನೆ ಎಂದು ಭಾವುಕರಾದ ಅವರು, ಕಷ್ಟದ ಸಮಯದಲ್ಲಿ ಮಾರುತಿ ಗುರೂಜಿಯವರು ನೀಡಿದ ನೆರವನ್ನೂ ನೆನಪಿಸಿಕೊಂಡು, ಗೌರವಕ್ಕಾಗಿ ತಮ್ಮ ಕುಟುಂಬದ ಪರವಾಗಿ ಕೃತಜ್ಞತೆ ಸಲ್ಲಿಸಿದರು.

ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಹಾಗೂ ಖ್ಯಾತ ಕಲಾವಿದ ವಿದ್ಯಾಧರ ರಾವ್ ಜಲವಳ್ಳಿ ಮಾತನಾಡಿ, ಮಾರುತಿ ಗುರೂಜಿಯವರ ದೂರದೃಷ್ಟಿ, ಕಲಾಪ್ರೀತಿ ಹಾಗೂ ಯಕ್ಷಗಾನದ ಮೇಲಿನ ಅಭಿಮಾನದಿಂದ ಬಂಗಾರಮಕ್ಕಿ ಕಲಾವಿದರು ಮತ್ತು ಕಲಾಭಿಮಾನಿಗಳಿಗೆ ಆಶ್ರಯತಾಣವಾಗಿ ಬೆಳೆದಿದೆ ಎಂದರು. ಯಕ್ಷಪೂರ್ಣಿಮೆ ಜಿಲ್ಲೆಯ ಹೆಮ್ಮೆಯ ಉತ್ಸವವಾಗಿ ಬೆಳೆಯುತ್ತಿದ್ದು, ಕ್ಷೇತ್ರದಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ನಿರಂತರವಾಗಿ ನಡೆಯಲಿ ಎಂದು ಆಶಿಸಿದರು.

‘ಯಕ್ಷರಂಗ’ ಪತ್ರಿಕೆಯ ಸಂಪಾದಕ ಗೋಪಾಲಕೃಷ್ಣ ಭಾಗ್ವತ ಮಾತನಾಡಿ, ಬಂಗಾರಮಕ್ಕಿ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ಕ್ಷೇತ್ರವಾಗಿ ಗುರುತಿಸಿಕೊಂಡಿದೆ. ಯಕ್ಷಗಾನದ ಶುದ್ಧ ಸ್ವರೂಪ ಮತ್ತು ಮೂಲ ಪರಂಪರೆಯನ್ನು ಉಳಿಸಿಕೊಳ್ಳುವುದು ಅಗತ್ಯ. ಪ್ರದರ್ಶನಗಳಿಗೆ ಪೂರಕವಾದ ಉತ್ತಮ ವ್ಯವಸ್ಥೆಗಳಿರುವ ಕ್ಷೇತ್ರದಲ್ಲಿ ಕಲಾವಿದರು ಮತ್ತು ಕಲಾಭಿಮಾನಿಗಳು ಅವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಸಾಮಾಜಿಕ ಧುರೀಣ ಶಿವಾನಂದ ಹೆಗಡೆ ಕಡತೋಕಾ ಮಾತನಾಡಿ, ಬಂಗಾರಮಕ್ಕಿ ಕಲಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಜತೆಗೆ ಸಾಮಾಜಿಕ ಸಮಸ್ಯೆಗಳ ಪರಿಹಾರಕ್ಕೂ ಶ್ರಮಿಸುತ್ತಿದೆ. ಮಾರುತಿ ಗುರೂಜಿಯವರು ಕ್ಷೇತ್ರವನ್ನು ವಿವಿಧ ಆಯಾಮಗಳಲ್ಲಿ ಮುನ್ನಡೆಸುತ್ತಿರುವುದು ಶ್ಲಾಘನೀಯ ಎಂದರು.

ಮಂಕಿ ಮಂಡಲ ಬಿಜೆಪಿ ಅಧ್ಯಕ್ಷ ಮಂಜುನಾಥ ನಾಯ್ಕ ಮಾತನಾಡಿ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಬಂಗಾರಮಕ್ಕಿ ಸಮಾಜಕ್ಕೆ ಮಹತ್ವದ ಕೊಡುಗೆ ನೀಡುತ್ತಿದೆ. ಸಾಂಪ್ರದಾಯಿಕ ಕಲೆಗಳಿಗೆ ಪ್ರೋತ್ಸಾಹ ನೀಡುವುದರ ಜತೆಗೆ ಸಾಮಾಜಿಕ ಜಾಗೃತಿಯ ಕಾರ್ಯಗಳಲ್ಲಿಯೂ ತೊಡಗಿಸಿಕೊಂಡಿದೆ ಎಂದರು.

ಆಶೀರ್ವಚನ ನೀಡಿದ ಮಾರುತಿ ಗುರೂಜಿಯವರು, ಜೀವನದಲ್ಲಿ ನೆಮ್ಮದಿ ಮತ್ತು ಆನಂದ ಪಡೆಯಲು ಕಲೆಯೊಂದಿಗೆ ನಂಟು ಬೆಳೆಸಿಕೊಳ್ಳಬೇಕು. ಕಲೆಯನ್ನು ಕೇವಲ ಮನರಂಜನೆಯಾಗಿ ನೋಡದೆ, ಅದರಲ್ಲಿರುವ ಮೌಲ್ಯಗಳನ್ನು ಅರಿತು ಆಸ್ವಾದಿಸಬೇಕು ಎಂದರು.

ಸಮಾರೋಪ ಸಮಾರಂಭದ ಬಳಿಕ ರಾತ್ರಿ ‘ಯಜ್ಞಾಶ್ವ’ ಯಕ್ಷಗಾನ ಪ್ರದರ್ಶನ ನಡೆಯಿತು.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad

Most Popular

Recent Comments

error: Content is protected !!
Share