Friday, July 24, 2026
Join WhatsApp Group
HomeNationalಉಚಿತ ನೀಡುವ ಸರ್ಕಾರಗಳಿಗೆ ಸುಪ್ರೀಂ ಚಾಟಿ

ಉಚಿತ ನೀಡುವ ಸರ್ಕಾರಗಳಿಗೆ ಸುಪ್ರೀಂ ಚಾಟಿ

ನವದೆಹಲಿ: ದೇಶದ ರಾಜಕೀಯದಲ್ಲಿ ಉಚಿತ ಯೋಜನೆಗಳ ಸಂಸ್ಕೃತಿ ದಿನೇದಿನೇ ಗಟ್ಟಿಯಾಗುತ್ತಿದ್ದು, ಈ ವಿಚಾರವಾಗಿ ಸರ್ವೋಚ್ಚ ನ್ಯಾಯಾಲಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಚುನಾವಣಾ ಸಮಯದಲ್ಲಿ ರಾಜಕೀಯ ಪಕ್ಷಗಳು ಘೋಷಿಸುವ ಉಚಿತ ಕೊಡುಗೆಗಳು ದೇಶದ ಆರ್ಥಿಕ ಶಿಸ್ತು ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಧಕ್ಕೆಯಾಗುತ್ತಿವೆ ಎಂಬ ಆತಂಕವನ್ನು ನ್ಯಾಯಾಲಯ ಹೊರಹಾಕಿದೆ.

ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ನೇತೃತ್ವದ ಪೀಠದಲ್ಲಿ ನ್ಯಾಯಮೂರ್ತಿಗಳಾದ ಜಾಯ್ ಮಾಲಾ ಬಾಗ್ಚಿ ಮತ್ತು ವಿಪುಲ್ ಪಾಂಚೋಲಿ ಇದ್ದರು. ಪಂಚ ಗ್ಯಾರಂಟಿ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಘೋಷಿಸಲಾಗುತ್ತಿರುವ ಉಚಿತ ಯೋಜನೆಗಳ ಕುರಿತು ಪರೋಕ್ಷವಾಗಿ ಉಲ್ಲೇಖಿಸಿದ ಪೀಠ, ಜನರ ತೆರಿಗೆ ಹಣವನ್ನು ವಿವೇಚನಾರಹಿತವಾಗಿ ಹಂಚುವುದು ಎಷ್ಟು ಸಮಂಜಸ ಎಂದು ಪ್ರಶ್ನಿಸಿದೆ.

ಇದು ಒಂದೇ ರಾಜ್ಯದ ಸಮಸ್ಯೆಯಲ್ಲ; ಹಲವು ರಾಜ್ಯಗಳಲ್ಲಿ ಇದೇ ಪ್ರವೃತ್ತಿ ಮುಂದುವರಿದಿದೆ. ನಾವು ಯಾವ ರೀತಿಯ ಸಂಸ್ಕೃತಿಯನ್ನು ಬೆಳೆಸುತ್ತಿದ್ದೇವೆ? ಯಾರು ನಿಜವಾಗಿಯೂ ನೆರವಿಗೆ ಅರ್ಹರು, ಯಾರು ಸ್ವಾವಲಂಬಿಗಳಾಗಿದ್ದಾರೆ ಎಂಬುದನ್ನು ಪರಿಶೀಲಿಸದೇ ಎಲ್ಲರಿಗೂ ಉಚಿತವಾಗಿ ಕೊಡುವುದು ಸರಿಯೇ? ಇದು ಒಂದು ವರ್ಗದವರ ಓಲೈಕೆಯಲ್ಲವೇ?”ಎಂದು ನ್ಯಾಯಾಲಯ ಪ್ರಶ್ನಿಸಿದೆ.

ಅಗತ್ಯವಿರುವವರಿಗೆ ನೆರವು ನೀಡುವುದು ಸರ್ಕಾರದ ಕರ್ತವ್ಯವೇ ಸರಿ. ಆದರೆ ಶಕ್ತರು ಮತ್ತು ಶಕ್ತರಲ್ಲದವರು ಎಂಬ ಭೇದವಿಲ್ಲದೆ ವಿತರಿಸಿದರೆ, ಅದರ ಲಾಭ ಮೊದಲು ಶ್ರೀಮಂತರಿಗೆ ತಲುಪುತ್ತದೆ ಎಂಬ ಆತಂಕವನ್ನೂ ಪೀಠ ವ್ಯಕ್ತಪಡಿಸಿದೆ. ಶಿಕ್ಷಣ ಪಡೆಯಲಾಗದ ಮಕ್ಕಳಿಗೆ ರಾಜ್ಯ ಸಹಾಯ ಮಾಡಬೇಕು. ಮೂಲಸೌಕರ್ಯ, ಆಸ್ಪತ್ರೆಗಳು, ಶಾಲೆ-ಕಾಲೇಜುಗಳ ಅಭಿವೃದ್ಧಿಗೆ ಆದ್ಯತೆ ಕೊಡಬೇಕು. ಆದರೆ ಚುನಾವಣೆಯ ಸಮಯದಲ್ಲಿ ವಸ್ತುಗಳನ್ನು ವಿತರಿಸುವ ಸ್ಪರ್ಧೆ ನಡೆಯುತ್ತಿದೆ ಎಂದು ಕಟುವಾಗಿ ಟೀಕಿಸಿದೆ.

ರಾಜ್ಯಗಳು ತಮ್ಮ ನೀತಿ ಚೌಕಟ್ಟನ್ನು ಮರುಪರಿಶೀಲಿಸುವ ಅಗತ್ಯವಿದೆ ಎಂದು ಸೂಚಿಸಿರುವ ಸುಪ್ರೀಂ ಕೋರ್ಟ್, ಉಚಿತ ಯೋಜನೆಗಳ ಪರಿಣಾಮವಾಗಿ ದೇಶದ ಆರ್ಥಿಕತೆಗೆ ಉಂಟಾಗುವ ದೀರ್ಘಕಾಲೀನ ಪರಿಣಾಮಗಳ ಬಗ್ಗೆ ಎಚ್ಚರಿಕೆ ನೀಡಿದೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share