Ad
Home Local Story ಇದು ಉತ್ತರಕನ್ನಡ ಪ್ರಯಾಸೋದ್ಯಮ!

ಇದು ಉತ್ತರಕನ್ನಡ ಪ್ರಯಾಸೋದ್ಯಮ!

0
21

ಯಲ್ಲಾಪುರ: ಮಳೆಗಾಲ ಆರಂಭವಾದರೆ ಸಾಕು, ಜಲಪಾತಗಳು ತುಂಬಿ ಹರಿಯುತ್ತವೆ, ಅರಣ್ಯಗಳು ಹಚ್ಚಹಸಿರಾಗುತ್ತವೆ, ಪ್ರಕೃತಿ ತನ್ನ ವೈಭವವನ್ನು ಅನಾವರಣಗೊಳಿಸುತ್ತದೆ. ಇಂತಹ ಸಮಯವೇ ಪ್ರವಾಸೋದ್ಯಮದ ಸೀಸನ್. ಆದರೆ ಇದೇ ವೇಳೆಯಲ್ಲಿ “ಸುರಕ್ಷತೆ” ಎಂಬ ನೆಪವೊಡ್ಡಿ ಪ್ರಮುಖ ಪ್ರವಾಸಿ ತಾಣಗಳಿಗೆ ಬೀಗ ಹಾಕುವ ಸಂಪ್ರದಾಯ ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಮುಂದುವರಿಯುತ್ತಿದೆ. ಪ್ರವಾಸಿಗರು ಬರುವ ಸಮಯದಲ್ಲೇ ತಾಣಗಳನ್ನು ಮುಚ್ಚಿದರೆ ಪ್ರವಾಸೋದ್ಯಮ ಬೆಳೆಯುವುದು ಯಾವಾಗ?

ತಾಲೂಕಿನ ಸಾತೊಡ್ಡಿ, ಮಾಗೋಡ, ಕುಳಿಮಾಗೋಡ, ಶಿರಲೆ, ಕಾನೂರು, ಲಾಲಗುಳಿ ಜಲಪಾತಗಳು, ಜೇನುಕಲ್ಲುಗುಡ್ಡ, ಸೂರ್ಯಕಲ್ಯಾಣಿ, ಕಾಳಿನದಿ ತೂಗು ಸೇತುವೆ ಸೇರಿದಂತೆ ಅನೇಕ ತಾಣಗಳಿಗೆ ಈಗ ಪ್ರವೇಶ ನಿರ್ಬಂಧಿಸಲಾಗಿದೆ. ಅಪಘಾತ ತಡೆಯುವ ಉದ್ದೇಶ ಒಳ್ಳೆಯದೇ. ಆದರೆ ಪ್ರತಿ ವರ್ಷವೂ ಇದೇ ಕಾರಣ ಹೇಳಿ ಬೀಗ ಹಾಕುವುದು ಸಮಸ್ಯೆಗೆ ಪರಿಹಾರವೇ ಎಂಬ ಪ್ರಶ್ನೆ ಉದ್ಭವಿಸಿದೆ.

ಅಪಘಾತದ ಭಯವಿದ್ದರೆ ಸುರಕ್ಷತಾ ವ್ಯವಸ್ಥೆಗಳನ್ನು ಕಲ್ಪಿಸಬೇಕು. ಜಲಪಾತಗಳ ಬಳಿ ವೀಕ್ಷಣಾ ವೇದಿಕೆ, ತಡೆಬೇಲಿ, ಎಚ್ಚರಿಕೆ ಫಲಕ, ರಕ್ಷಣಾ ಸಿಬ್ಬಂದಿ, ಸಿಸಿಟಿವಿ, ತುರ್ತು ಚಿಕಿತ್ಸಾ ವ್ಯವಸ್ಥೆ, ತರಬೇತಿ ಪಡೆದ ಗಾರ್ಡ್‌ಗಳನ್ನು ನಿಯೋಜಿಸಬೇಕು. ಆದರೆ ಇವುಗಳನ್ನು ಮಾಡುವ ಬದಲು ಪ್ರವೇಶವನ್ನೇ ನಿಷೇಧಿಸುವುದು ಆಡಳಿತದ ಸುಲಭ ಮಾರ್ಗ. ಇದು ಸಮಸ್ಯೆ ಪರಿಹರಿಸುವ ಕ್ರಮವಲ್ಲ, ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವ ಕ್ರಮವಷ್ಟೇ!

ಉತ್ತರ ಕನ್ನಡ ಜಿಲ್ಲೆಯ ಪ್ರವಾಸೋದ್ಯಮದ ದುರಂತವೆಂದರೆ, ಪ್ರಕೃತಿಯು ಎಲ್ಲವನ್ನೂ ಕೊಟ್ಟಿದೆ. ಆದರೆ ಸರ್ಕಾರಗಳು ಏನನ್ನೂ ಕೊಟ್ಟಿಲ್ಲ. ವಿಶ್ವದರ್ಜೆಯ ಪ್ರವಾಸಿ ತಾಣಗಳಾಗುವ ಸಾಮರ್ಥ್ಯವಿರುವ ಅನೇಕ ಸ್ಥಳಗಳು ಇಂದಿಗೂ ಮೂಲ ಸೌಲಭ್ಯಗಳಿಂದ ವಂಚಿತವಾಗಿವೆ. ಹಲವೆಡೆ ಸರಿಯಾದ ರಸ್ತೆ ಇಲ್ಲ. ವಾಹನ ನಿಲುಗಡೆ ವ್ಯವಸ್ಥೆ ಇಲ್ಲ. ಶೌಚಾಲಯಗಳಿಲ್ಲ. ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಪ್ರವಾಸಿಗರು ತಲುಪಬೇಕಾದರೆ ರಸ್ತೆಯ ಗುಂಡಿಗಳಲ್ಲಿ ಎದ್ದು ಬಿದ್ದು ಹೋಗಬೇಕಾದ ಪರಿಸ್ಥಿತಿ ಇದೆ.

ಪ್ರವಾಸೋದ್ಯಮದಿಂದ ಸಾವಿರಾರು ಸ್ಥಳೀಯ ಯುವಕರಿಗೆ ಉದ್ಯೋಗ ಸೃಷ್ಟಿಯಾಗಬಹುದು. ಹೋಂಸ್ಟೇ, ಗೈಡ್ ಸೇವೆ, ಹೋಟೆಲ್, ಸಾರಿಗೆ, ಸ್ಥಳೀಯ ಉತ್ಪನ್ನಗಳ ಮಾರಾಟ ಸೇರಿದಂತೆ ಅನೇಕ ವಲಯಗಳು ಬೆಳೆಯಬಹುದು. ಆದರೆ ಜಿಲ್ಲೆಯನ್ನು ಪ್ರತಿನಿಧಿಸುವ ರಾಜಕಾರಣಿಗಳ ಆದ್ಯತೆಯಲ್ಲಿ ಪ್ರವಾಸೋದ್ಯಮ ಕಾಣುವುದೇ ಇಲ್ಲ ಎಂಬ ಆರೋಪ ಕೇಳಿಬರುತ್ತಿದೆ.

 ಚುನಾವಣೆ ಬಂದಾಗ ಅಭಿವೃದ್ಧಿಯ ಭರವಸೆ ನೀಡುವ ನಾಯಕರು, ಅಧಿಕಾರಕ್ಕೆ ಬಂದ ಬಳಿಕ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಬೇಕಾದ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ಆಸಕ್ತಿ ತೋರಿಸುತ್ತಿಲ್ಲ.

 ಪ್ರತಿವರ್ಷ ಮಳೆಗಾಲ ಬಂದಾಗ ಪ್ರವಾಸಿ ತಾಣಗಳಿಗೆ ಬೀಗ ಹಾಕುವುದಾದರೆ, ಸುರಕ್ಷಿತ ಪ್ರವಾಸೋದ್ಯಮಕ್ಕಾಗಿ ಕಳೆದ ಹಲವು ವರ್ಷಗಳಲ್ಲಿ ಸರ್ಕಾರಗಳು ಏನು ಮಾಡಿವೆ? ಕೋಟ್ಯಂತರ ರೂಪಾಯಿ ತೆರಿಗೆ ಸಂಗ್ರಹಿಸುವ ಸರ್ಕಾರಗಳಿಗೆ ಕೆಲವೇ ಲಕ್ಷ ರೂಪಾಯಿ ವೆಚ್ಚದಲ್ಲಿ ಮೂಲಭೂತ ಸುರಕ್ಷತಾ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗಲಿಲ್ಲವೇ?

ಪ್ರಕೃತಿ ಕೊಟ್ಟಿರುವ ಅಪರೂಪದ ಸಂಪತ್ತನ್ನು ಅಭಿವೃದ್ಧಿಪಡಿಸಿ ಉದ್ಯೋಗ ಸೃಷ್ಟಿಸುವ ಬದಲು, “ಅಪಾಯ ಇದೆ” ಎಂದು ಫಲಕ ಹಾಕಿ ತಾಣಗಳನ್ನು ಮುಚ್ಚುವುದು ಸುಲಭ. ಆದರೆ ಇದು ಪ್ರವಾಸೋದ್ಯಮ ನೀತಿಯ ವೈಫಲ್ಯವನ್ನೂ, ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯನ್ನೂ ಬಯಲಿಗೆಳೆಯುತ್ತದೆ.

ಸುರಕ್ಷತೆ ಮುಖ್ಯವೆಂಬುದು ಸರಿ. ಆದರೆ ಸುರಕ್ಷತೆ ಹೆಸರಿನಲ್ಲಿ ಪ್ರವಾಸೋದ್ಯಮವನ್ನೇ ಉಸಿರುಗಟ್ಟಿಸುವುದು ಜಿಲ್ಲೆಗೆ ದೀರ್ಘಾವಧಿಯಲ್ಲಿ ಮತ್ತಷ್ಟು ಹಿನ್ನಡೆಯನ್ನೇ ಉಂಟುಮಾಡಲಿದೆ. ದಶಕಗಳು ಸರಿದರೂ ಇದೇ ಸ್ಥಿತಿಯಿದ್ದರೆ ಪ್ರವಾಸ ಉದ್ಯಮವಾಗುವುದು ಯಾವಾಗ, ಇಲ್ಲಿನ ಯುವಕರು ಉದ್ಯಮಿಗಳಾಗುವುದು ಯಾವಾಗ?

Previous articleಈ ಕೀಟವೀಗ ಸೂಪರ್ ಫುಡ್!
Next articleಜೈಲು ಸೇರಿದ ಗಾಂಜಾ ಅಜ್ಜ
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

error: Content is protected !!