Friday, March 13, 2026
HomeInformationಮರಗಳೂ ಮಾತನಾಡುತ್ತವೆ!

ಮರಗಳೂ ಮಾತನಾಡುತ್ತವೆ!

ಕಾಡಿನೊಳಗೆ ನಿಂತು ನೋಡಿದರೆ ಮರಗಳು ಮೌನವಾಗಿ ನಿಂತಿರುವಂತೆಯೇ ಕಾಣುತ್ತವೆ. ಆದರೆ ಆ ಮೌನದ ಹಿಂದೆ ನಡೆಯುತ್ತಿರುವುದು ಅಚ್ಚರಿಯ ಸಂವಹನ ಜಾಲ. ಮರಗಳು ನಮ್ಮಂತೆ ಮಾತಾಡುವುದಿಲ್ಲ, ಆದರೆ ಅವು ರಾಸಾಯನಿಕಗಳ ಮೂಲಕ, ಬೇರುಗಳ ಮೂಲಕ, ಮತ್ತು ಗಾಳಿಯ ಮೂಲಕ ಪರಸ್ಪರ ಮಾಹಿತಿ ಹಂಚಿಕೊಳ್ಳುತ್ತವೆ! ವಿಜ್ಞಾನಿಗಳು ಇದನ್ನು “Wood Wide Web” ಎಂದು ಕರೆಯುತ್ತಾರೆ.

ಮರಗಳ ಬೇರುಗಳಿಗೆ ಮೈಕೋರೈಜಲ್ ಶಿಲೀಂಧ್ರಗಳು ಅಂಟಿಕೊಂಡಿರುತ್ತವೆ. ಈ ಶಿಲೀಂಧ್ರಗಳು ಮಣ್ಣಿನಡಿ ಒಂದು ವಿಶಾಲ ಜಾಲವನ್ನು ನಿರ್ಮಿಸುತ್ತವೆ. ಅದೇ ಜಾಲ ಒಂದು ಮರವನ್ನು ಇನ್ನೊಂದು ಮರಕ್ಕೆ ಕೊಂಡಿಯಂತೆ ಸಂಪರ್ಕಿಸುತ್ತದೆ. ಈ ಸಂಪರ್ಕದ ಮೂಲಕ ಮರಗಳು ನೈಟ್ರಜನ, ಫಾಸ್ಫರಸ್ ಮುಂತಾದ ಪೋಷಕಾಂಶಗಳನ್ನು ಪರಸ್ಪರ ಹಂಚಿಕೊಳ್ಳುತ್ತವೆ. ಅಷ್ಟೇ ಅಲ್ಲ, ಒಂದು ಮರಕ್ಕೆ ನೀರಿನ ಕೊರತೆ ಉಂಟಾದರೆ ಅಥವಾ ಕೀಟದ ದಾಳಿ ನಡೆದರೆ, ಆ ಒತ್ತಡದ ಮಾಹಿತಿಯನ್ನೂ ಹತ್ತಿರದ ಮರಗಳಿಗೆ ಸಾಗಿಸಬಹುದು.

ಕೀಟಗಳು ಒಂದು ಮರದ ಎಲೆಗಳನ್ನು ತಿನ್ನಲು ಶುರು ಮಾಡಿದಾಗ, ಆ ಮರ ಗಾಳಿಯ ಮೂಲಕ ಕೆಲವು ವಿಶೇಷ ರಾಸಾಯನಿಕ ವಾಸನೆಗಳನ್ನು ಬಿಡುಗಡೆ ಮಾಡುತ್ತದೆ. ಹತ್ತಿರದ ಮರಗಳು ಆ ವಾಸನೆಯನ್ನು ಗುರುತಿಸಿ, ತಮ್ಮ ಎಲೆಗಳಲ್ಲಿ ರಕ್ಷಣಾತ್ಮಕ ರಸಾಯನಿಕಗಳನ್ನು ಹೆಚ್ಚಿಸುತ್ತವೆ. ಕೆಲವೊಮ್ಮೆ ಆ ವಾಸನೆಗಳು ಕೀಟಗಳನ್ನು ತಿನ್ನುವ ಕೀಟಭಕ್ಷಕ ಪ್ರಾಣಿಗಳನ್ನು ಆಕರ್ಷಿಸುತ್ತವೆ. ಅಂದರೆ ಒಂದು ಮರದ ಮೇಲಿನ ದಾಳಿ, ಇಡೀ ಪ್ರದೇಶಕ್ಕೆ ಎಚ್ಚರಿಕೆ ಸಂದೇಶವಾಗಿ ಪರಿಣಮಿಸುತ್ತದೆ. ಇದು ಪ್ರಕೃತಿಯ ಅಲಾರಂ ವ್ಯವಸ್ಥೆಯಂತೆಯೇ ಕೆಲಸ ಮಾಡುತ್ತದೆ.

ಕಾಡಿನಲ್ಲಿ ಹಳೆಯ, ದೊಡ್ಡ ಮರಗಳು ಇನ್ನೂ ವಿಶೇಷ. ಕೆಲವು ಸಂಶೋಧನೆಗಳು ಸೂಚಿಸುವಂತೆ, ಇಂತಹ “ತಾಯಿ ಮರಗಳು” ತಮ್ಮ ಸುತ್ತಲಿನ ಚಿಕ್ಕ ಸಸಿಗಳಿಗೆ ಹೆಚ್ಚು ಪೋಷಕಾಂಶ ಕಳುಹಿಸುತ್ತವೆ. ನೆರಳಿನಲ್ಲಿ ಬೆಳೆಯಲು ಹೋರಾಡುತ್ತಿರುವ ಸಸಿಗಳಿಗೆ ಅವು ಸಹಾಯ ಮಾಡುತ್ತವೆ. ಕೆಲವು ಸಂದರ್ಭಗಳಲ್ಲಿ ತಮ್ಮ ಸಂತತಿಯ ಸಸಿಗಳಿಗೆ ಹೆಚ್ಚಿನ ಬೆಂಬಲ ನೀಡುತ್ತವೆ ಎಂಬ ಸೂಚನೆಗಳೂ ಕಂಡುಬಂದಿವೆ.

ಕಾಡು ಎಂದರೆ ಕೇವಲ ಮರಗಳ ಗುಂಪಲ್ಲ. ಅದು ಪರಸ್ಪರ ಅವಲಂಬಿತ ಜೀವಜಾಲ. ಒಂದು ಮರವನ್ನು ಕಡಿದರೆ, ಆ ಮಣ್ಣಿನಡಿ ಇರುವ ಸಂವಹನ ಜಾಲಕ್ಕೂ ಹೊಡೆತವಾಗಬಹುದು. ನಾವು ಕೇಳಲಾರದ, ನೋಡಲಾರದ ಭಾಷೆಯಲ್ಲಿ ಪ್ರಕೃತಿ ನಿರಂತರ ಸಂವಹನ ನಡೆಸುತ್ತಿದೆ. ಅದನ್ನು ತಿಳಿದುಕೊಂಡಾಗ “ಅಬ್ಬಾ! ಹೀಗೂ ಇದೆಯಾ!” ಎಂಬ ಆಶ್ಚರ್ಯ ಸಹಜವಾಗಿ ಮೂಡುತ್ತದಲ್ಲವೇ?!

RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share