Friday, March 13, 2026
HomeCrimeಬಿಟ್ಟಿ ಗಿಫ್ಟ್‌ ಆಸೆಗೆ ಬೀಳಬೇಡಿ!

ಬಿಟ್ಟಿ ಗಿಫ್ಟ್‌ ಆಸೆಗೆ ಬೀಳಬೇಡಿ!

ಉಡುಪಿಯಲ್ಲಿ ಮತ್ತೊಂದು ಆನ್‌ಲೈನ್ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾದ ವ್ಯಕ್ತಿಯ ಮಾತುಗಳನ್ನು ನಂಬಿದ ಮಹಿಳೆಯೊಬ್ಬರು ಸುಮಾರು 7.10 ರೂ ಲಕ್ಷ ಹಣ ಕಳೆದುಕೊಂಡಿದ್ದಾರೆ. ಈ ಘಟನೆ ಫೆಬ್ರವರಿ 2026ರಲ್ಲಿ ನಡೆದಿದ್ದು, ಸೈಬರ್ ಅಪರಾಧಿಗಳ ಹೊಸ ತಂತ್ರಗಳ ಬಗ್ಗೆ ಮತ್ತೆ ಎಚ್ಚರಿಸುವಂತಿದೆ.

ಉಡುಪಿಯ 37 ವರ್ಷದ ರಾಣಿ ಅವರಿಗೆ ಫೆಬ್ರವರಿ 4ರಂದು ಫೇಸ್‌ಬುಕ್‌ನಲ್ಲಿ ‘Amadeo Luca’ ಎಂಬ ಖಾತೆಯಿಂದ ಸಂದೇಶ ಬಂದಿತ್ತು. ಮೊದಲಿಗೆ ಸಾಮಾನ್ಯ ಪರಿಚಯದ ಮಾತುಕತೆಯಾಗಿ ಆರಂಭವಾದ ಚಾಟಿಂಗ್ ನಂತರ ವಾಟ್ಸಾಪ್‌ಗೆ ಸರಿಯಿತು. ನಂಬಿಕೆ ಗಳಿಸಿದ ಬಳಿಕ ವಂಚಕನು ತಾನು ಚಿನ್ನದ ಆಭರಣಗಳು, ಮೊಬೈಲ್ ಫೋನ್ ಹಾಗೂ ಯುಎಸ್ ಡಾಲರ್ ಒಳಗೊಂಡ ದುಬಾರಿ ಪಾರ್ಸೆಲ್ ಕಳುಹಿಸಿದ್ದಾಗಿ ಹೇಳಿ ಆಮಿಷ ಒಡ್ಡಿದ್ದಾನೆ.

ಕೆಲವು ದಿನಗಳ ಬಳಿಕ “ಪಾರ್ಸೆಲ್ ವಿಮಾನ ನಿಲ್ದಾಣಕ್ಕೆ ತಲುಪಿದೆ, ಆದರೆ ಕಸ್ಟಮ್ಸ್ ಶುಲ್ಕ ಪಾವತಿಸಬೇಕು” ಎಂದು ತಿಳಿಸಿ ಮೊದಲಿಗೆ 45 ಸಾವಿರ ರೂ ಹಣವನ್ನು ವರ್ಗಾಯಿಸಿಕೊಳ್ಳಲಾಗಿದೆ. ನಂತರ ವಿವಿಧ ತೆರಿಗೆಗಳು, ಪ್ರೊಸೆಸಿಂಗ್ ಶುಲ್ಕಗಳು ಎಂಬ ನೆಪದಲ್ಲಿ ಹಂತ ಹಂತವಾಗಿ ಒಟ್ಟು 7.10 ಲಕ್ಷ ರೂಗಳನ್ನು ಬ್ಯಾಂಕ್ ಆಫ್ ಬರೋಡಾ ಖಾತೆಯಿಂದ ವರ್ಗಾಯಿಸಿಕೊಂಡಿದ್ದಾರೆ. ಹಣ ನೀಡಿದರೂ ಪಾರ್ಸೆಲ್ ಬರದಿದ್ದಾಗಲೇ ಮಹಿಳೆಗೆ ತಾನು ಮೋಸಕ್ಕೆ ಒಳಗಾಗಿರುವುದು ಗೊತ್ತಾಗಿದೆ.

ಈ ಸಂಬಂಧ ಫೆಬ್ರವರಿ 17ರಂದು ಉಡುಪಿಯ CEN ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದು, ಸಾರ್ವಜನಿಕರಿಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ.

* ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯವಿಲ್ಲದವರ ದುಬಾರಿ ಉಡುಗೊರೆ, ಪಾರ್ಸೆಲ್, ವಿದೇಶಿ ಕರೆನ್ಸಿ ಆಮಿಷಗಳನ್ನು ನಂಬಬೇಡಿ.

* ಯಾವುದೇ ಕಸ್ಟಮ್ಸ್ ಅಥವಾ ಸರ್ಕಾರಿ ಇಲಾಖೆ ವೈಯಕ್ತಿಕ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಲು ಕೇಳುವುದಿಲ್ಲ.

* ಆನ್‌ಲೈನ್ ವಂಚನೆ ಅನುಮಾನವಾದ ತಕ್ಷಣವೇ ಸೈಬರ್ ಕ್ರೈಮ್ ಸಹಾಯವಾಣಿ 1930ಗೆ ಕರೆ ಮಾಡಿ, ದೂರು ದಾಖಲಿಸಿ.

* ಸಮೀಪದ ಪೊಲೀಸ್ ಠಾಣೆಗೆ ತಕ್ಷಣ ದೂರು ನೀಡಿ. ವಿಳಂಬ ಮಾಡಿದರೆ ಹಣ ವಾಪಸು ಪಡೆಯುವುದು ಕಷ್ಟವಾಗಬಹುದು.

ಇತ್ತೀಚೆಗೆ ಡಿಜಿಟಲ್ ಅರೆಸ್ಟ್ ಬೆದರಿಕೆ, ವರ್ಕ್ ಫ್ರಮ್ ಹೋಮ್, ಮ್ಯಾಟ್ರಮೋನಿಯಲ್‌ ಸೈಟ್‌ಗಳಲ್ಲಿ ಆಮಿಷ ಸೇರಿದಂತೆ ಹಲವು ರೂಪಗಳಲ್ಲಿ ಸೈಬರ್ ಮೋಸಗಳು ಹೆಚ್ಚಾಗುತ್ತಿವೆ. ಅಪರಿಚಿತರ ಜೊತೆಗಿನ ಆನ್‌ಲೈನ್ ಸ್ನೇಹ ಯಾವಾಗ ವಂಚನೆಯಾಗಿ ಮಾರ್ಪಡುತ್ತದೆ ಎಂಬುದು ತಿಳಿಯದು. ಆದ್ದರಿಂದ ಎಚ್ಚರಿಕೆಯೊಂದೇ ರಕ್ಷಣೆ. ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯವಾದವರ ಮಾತಿಗೆ ಮರುಳಾಗುವ ಮೊದಲು ಎರಡು ಬಾರಿ ಯೋಚಿಸುವುದು ಅತ್ಯಗತ್ಯ.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share