ಚಿಕ್ಕಮಗಳೂರು: ಕಾಡಾನೆಗಳ ಆತಂಕ ಹೆಚ್ಚಿದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಒಟ್ಟು 12 ಗ್ರಾಮಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಸಂಜೆ 4 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಸಾರ್ವಜನಿಕರ ಸಂಚಾರವನ್ನು ನಿಯಂತ್ರಿಸಲಾಗಿದೆ. ಈ ಕುರಿತು ತಹಸೀಲ್ದಾರರು ಆದೇಶ ಹೊರಡಿಸಿದ್ದು, ಫೆ.26 ನಿಷೇಧಾಜ್ಞೆ ಜಾರಿಯಲ್ಲಿರಲಿದೆ ಎಂದು ತಿಳಿಸಿದ್ದಾರೆ.
ಚಿಕ್ಕಮಗಳೂರು ತಾಲೂಕಿನ ಮೂಗ್ತಿಹಳ್ಳಿ, ವಸ್ತಾರೆ, ಮತ್ತಾವರ, ದಂಬದಹಳ್ಳಿ, ನಲ್ಲೂರು, ಕಾರೇಮನೆ, ಉಕ್ಕುಂದ, ಗಡಬನಹಳ್ಳಿ, ಜೋಳದಾಳು, ಚಿಕ್ಕೊಳಲೆ, ತಳಿಹಳ್ಳ ಹಾಗೂ ಶಿರಗುಂದ ಗ್ರಾಮಗಳಲ್ಲಿ ಜನರ ಸುರಕ್ಷತೆಗಾಗಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ವಿಶೇಷವಾಗಿ ಚಿಕ್ಕೊಳಲೆ ಅರಣ್ಯ ಪ್ರದೇಶದಲ್ಲಿ ಎರಡು ಕಾಡಾನೆಗಳು ಬೀಡುಬಿಟ್ಟಿರುವುದು ಪತ್ತೆಯಾಗಿದ್ದು, ಅವುಗಳ ಚಲನವಲನಗಳ ಮೇಲೆ ಅರಣ್ಯ ಇಲಾಖೆ ನಿಗಾವಹಿಸಿದೆ.
ರಾತ್ರಿ ವೇಳೆ ಮನೆಗಳ ಹೊರಗೆ ಅನಾವಶ್ಯಕವಾಗಿ ಓಡಾಡಬಾರದು, ಅಗತ್ಯವಿದ್ದಲ್ಲಿ ಗುಂಪುಗಳಲ್ಲಿ ಮಾತ್ರ ಸಂಚರಿಸಬೇಕು ಎಂದು ಸೂಚಿಸಲಾಗಿದೆ. ಯಾವುದೇ ತುರ್ತು ಪರಿಸ್ಥಿತಿ ಎದುರಾದಲ್ಲಿ ತಕ್ಷಣ ಅರಣ್ಯ ಇಲಾಖೆ ಅಥವಾ ಪೊಲೀಸ್ ಇಲಾಖೆಯನ್ನು ಸಂಪರ್ಕಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ.