Friday, October 23, 2026
HomeLocal Newsಶಾಸಕ ಹೆಬ್ಬಾರರು ಹುದ್ದೆಗೆ ತಕ್ಕಂತೆ ಮಾತನಾಡಲಿ: ಹರಿಪ್ರಕಾಶ ಕೋಣೆಮನೆ

ಶಾಸಕ ಹೆಬ್ಬಾರರು ಹುದ್ದೆಗೆ ತಕ್ಕಂತೆ ಮಾತನಾಡಲಿ: ಹರಿಪ್ರಕಾಶ ಕೋಣೆಮನೆ

ಯಲ್ಲಾಪುರ: ಕಾಂಗ್ರೆಸ್ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಬಿಜೆಪಿ ಕಾರ್ಯಕ್ರಮಗಳಿಂದ ದೂರ ಉಳಿದಿರುವ ಶಾಸಕ ಹೆಬ್ಬಾರರು ಮುಂದಿನ ಚುನಾವಣೆಯವರೆಗೆ ಪಕ್ಷದ ಚೌಕಟ್ಟಿನಲ್ಲಿಯೇ ಇರಬೇಕು. ಪಕ್ಷದ ನಿಲುವಿಗೆ ವಿರುದ್ಧವಾಗಿ ಮಾತನಾಡುವದಾದರೆ ರಾಜೀನಾಮೆ ನೀಡಿ ಮಾತನಾಡಲಿ ಎಂದು ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ಹೇಳಿದರು.

ಯಲ್ಲಾಪುರದ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ, ಶಾಸಕ ಶಿವರಾಮ ಹೆಬ್ಬಾರರು ಕಾರವಾರದಲ್ಲಿ ಚುನಾವಣಾ ಆಯುಕ್ತರ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಬಿಜೆಪಿ ಬಗ್ಗೆ ಆಡಿದ ನುಡಿಗಳಿಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ತಾವು ‘ಫ್ರೀ ಬರ್ಡ್’ ಎಂದು ಹೇಳಿಕೊಳ್ಳಲು ಸಾಧ್ಯವಿಲ್ಲ. ಕಾಂಗ್ರೆಸ್ ಕಾರ್ಯಕ್ರಮಗಳಲ್ಲಿ ಹಾಜರಾಗಿ, ಬಿಜೆಪಿ ಕಾರ್ಯಕ್ರಮಗಳಲ್ಲಿ ಗೈರಾಗಿರುವ ಬೆಳವಣಿಗೆಗಳು ಗಮನಕ್ಕೆ ಬಂದಿವೆ ಎಂದರು.

ಶಾಸಕರು ಕ್ಷೇತ್ರದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ. ಕಸ್ತೂರಿರಂಗನ್ ವರದಿ ವಿಚಾರದಲ್ಲಿ ಸಂಸದರ ಹಾಗೂ ಬಿಜೆಪಿಯ ನಿಲುವು ಸ್ಪಷ್ಟವಾಗಿದ್ದು, ಯಾವುದೇ ಹಂತದ ಹೋರಾಟಕ್ಕೂ ಸಿದ್ಧರಿದ್ದೇವೆ ಎಂದು ಹೇಳಿದರು.

ಹುದ್ದೆಗೆ ತಕ್ಕಂತೆ ಮಾತನಾಡಬೇಕು. ಸಂಸತ್ತು ತಲೆ ಚಚ್ಚಿಕೊಳ್ಳಲು ಇರುವುದಲ್ಲ. ನಮ್ಮ ಸಂಸದರು ಕ್ಷೇತ್ರದ ಜನರೊಂದಿಗೆ ಬೆರೆತು ಕೆಲಸ ಮಾಡುತ್ತಿದ್ದಾರೆ. ಕ್ಷೇತ್ರದ ಜನರಿಗೆ ನಿಮ್ಮಿಂದ ಏನು ಪ್ರಯೋಜನವಾಗಿದೆ ಎಂದು ಪ್ರಶ್ನಿಸಿದ ಅವರು, ಪಕ್ಷದಿಂದ ಉಚ್ಛಾಟನೆಯಾದರೂ ನೈತಿಕತೆ ಮರೆಯಬಾರದು ಎಂದು ಹೇಳಿದರು.

ಇದು ದುಡ್ಡಿನ ಅಥವಾ ಗೂಂಡಾ ರಾಜಕೀಯದ ಜಿಲ್ಲೆ ಅಲ್ಲ. ಅಧಿಕಾರ ಇರುವವರೆಗೆ ಕೆಲವರು ಮೆರೆಯಬಹುದು. ಆದರೆ ಅಧಿಕಾರದ ಹೊರತಾಗಿಯೂ ಕ್ಷೇತ್ರಕ್ಕೆ ವಿಧೇಯರಾಗಿ ಕೆಲಸ ಮಾಡಿದವರನ್ನು ಜನ ಎಂದಿಗೂ ನೆನಪಿಸಿಕೊಳ್ಳುತ್ತಾರೆ. ನಿಮ್ಮ ರಾಜೀನಾಮೆಗಾಗಿ ಕ್ಷೇತ್ರದ ಮತದಾರರು ಕಾಯುತ್ತಿದ್ದಾರೆ. ಅಗತ್ಯ ಬಂದರೆ ರಾಜೀನಾಮೆ ಕೊಡಿಸುತ್ತೇವೆ ಎಂದು ಕೋಣೆಮನೆ ಹೇಳಿದರು.

ರಾಜ್ಯ ಸರ್ಕಾರ ಮಲೆನಾಡಿನ ಕಾಡಂಚಿನ ನಿವಾಸಿಗಳನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆಸುತ್ತಿದೆ ಎಂದು ಆರೋಪಿಸಿದ ಅವರು, ಈ ವಿಚಾರದಲ್ಲಿ ಬಿಜೆಪಿ ಹೋರಾಟಕ್ಕೆ ಇಳಿದಿದೆ ಎಂದರು.

ಬಿಜೆಪಿ ಯಲ್ಲಾಪುರ ಮಂಡಲ ಅಧ್ಯಕ್ಷ ಪ್ರಸಾದ ಹೆಗಡೆ ಮಾತನಾಡಿ, ‘ನಮ್ಮ ಮನೆ ನಮ್ಮ ಹಕ್ಕು’ ಆಂದೋಲನ ಯಶಸ್ವಿಯಾಗಿದ್ದು, ಸೆ.21ರಿಂದ 29ರವರೆಗೆ ಕ್ಷೇತ್ರದ ಬಹುತೇಕ ಪಂಚಾಯಿತಿ ವ್ಯಾಪ್ತಿಯಲ್ಲಿ ಸಹಿ ಸಂಗ್ರಹ ನಡೆಸಲಾಗಿದೆ. ಈ ಸಂದರ್ಭದಲ್ಲಿ ಯಲ್ಲಾಪುರ ಕ್ಷೇತ್ರದ ಶಾಸಕರು ಮತದಾರರಿಗೆ ದ್ರೋಹ ಎಸಗಿದ್ದಾರೆ ಎಂಬ ಅಭಿಪ್ರಾಯ ಮತದಾರರಿಂದ ವ್ಯಕ್ತವಾಗಿದೆ ಎಂದು ಹೇಳಿದರು.

ಸರ್ಕಾರದ ಆದೇಶವನ್ನು ಹಿಂಪಡೆಯದಿದ್ದರೆ ಹೋರಾಟ ಮುಂದುವರಿಸಲಾಗುವುದು. ಬಿಜೆಪಿಯಿಂದ ಗೆದ್ದು ಕಾಂಗ್ರೆಸ್‌ನ ಎಂಎಲ್‌ಸಿಗಳಿಗೆ ಮತ ಹಾಕಿದವರಿಂದಲೇ ಪ್ರಜಾಪ್ರಭುತ್ವದ ಕಗ್ಗೊಲೆ ನಡೆದಿದೆ ಎಂದು ಹೇಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಸದರ ವಿರುದ್ಧವೂ ಸಲ್ಲದ ಮಾತುಗಳನ್ನು ಆಡಲಾಗಿದೆ ಎಂದು ಪ್ರಸಾದ ಹೆಗಡೆ ಹೇಳಿದರು.

ರಾಜ್ಯ ಸರ್ಕಾರ ಪ್ರತಿಯೊಂದು ಹಂತದಲ್ಲೂ ‘ಚೊಂಬಿನ ಭಾಗ್ಯ’ ನೀಡುತ್ತಿದೆ ಎಂದು ಟೀಕಿಸಿದ ಅವರು, ಆಡಳಿತ ಸುಧಾರಿಸದಿದ್ದರೆ ಬಿಜೆಪಿ ವತಿಯಿಂದ ಚೊಂಬು ಹಿಡಿದು ಪ್ರತಿಭಟನೆ ನಡೆಸಲಾಗುವುದು ಎಂದರು.

ಜಿ. ಪಂ ಮಾಜಿ ಸದಸ್ಯ ರಾಘವೇಂದ್ರ ಭಟ್ ಹಾಸಣಗಿ ಮಾತನಾಡಿ, ನಮ್ಮ ಸಂಸದರ ಪ್ರಯತ್ನದ ಫಲವಾಗಿ ವಂದೇ ಭಾರತ್ ರೈಲನ್ನು ಬೆಂಗಳೂರಿನವರೆಗೆ ವಿಸ್ತರಿಸಲಾಗಿದೆ. ಕಾಡಂಚಿನ ನಿವಾಸಿಗಳಿಗೆ ಮಾರಕವಾಗಬಹುದಾದ ಸರ್ಕಾರದ ಸುತ್ತೋಲೆಯನ್ನು ರದ್ದುಪಡಿಸುವಂತೆ ಕಾಂಗ್ರೆಸ್ ಶಾಸಕರು ಒತ್ತಾಯಿಸಬಹುದಿತ್ತು ಎಂದು ಹೇಳಿದರು.

ಬಿಜೆಪಿ ಪ್ರಮುಖ ಗಣೇಶ ಪಾಟಣಕರ್ ಮಾತನಾಡಿ, ಶಿವರಾಮ ಹೆಬ್ಬಾರರು ಶಾಸಕರಾದಾಗ ಯಲ್ಲಾಪುರ ಸಿಂಗಾಪುರ ಆಗಲಿದೆ ಎಂಬ ಕನಸಿತ್ತು. ಆದರೆ ನಿರೀಕ್ಷಿತ ರೀತಿಯಲ್ಲಿ ಅಭಿವೃದ್ಧಿಯಾಗಿಲ್ಲ. ಪಕ್ಷಾಂತರ ಮಾಡುತ್ತ ಕಾಲಹರಣ ಮಾಡಲಾಗುತ್ತಿದೆ. ಬಿಜೆಪಿಯಿಂದ ಎಲ್ಲವನ್ನೂ ಪಡೆದು ಈಗ ಕಾಂಗ್ರೆಸ್ ಪರ ನಿಂತರೆ ಅಭಿವೃದ್ಧಿ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. 

ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಪ್ರಮುಖರಾದ ಉಮೇಶ್ ಭಾಗ್ವತ್ ಕಳಚೆ, ಶ್ರೀಕಾಂತ್ ಹೆಬ್ಬಾರ್, ಜಿ.ಆರ್. ಭಾಗ್ವತ್, ಮಹಾಬಲೇಶ್ವರ ಭಟ್ಟ ಸೇರಿದಂತೆ ಇತರರು ಉಪಸ್ಥಿತರಿದ್ದರು.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

Recent Comments

error: Content is protected !!
Share