ಯಲ್ಲಾಪುರ: ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸುತ್ತಿದ್ದ ಕ್ರೂಸರ್‌ವೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಯುವಕನೊಬ್ಬ ಗಂಭೀರವಾಗಿ ಗಾಯಗೊಂಡು, ಸಾವು-ಬದುಕಿನ ನಡುವೆ ಹೋರಾಡಿ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ಯಲ್ಲಾಪುರ ಪಟ್ಟಣದಲ್ಲಿ ನಡೆದಿದೆ.
ಸೆ.13ರಂದು ಸಂಜೆ ಸುಮಾರು 6.50ರ ವೇಳೆಗೆ ಯಲ್ಲಾಪುರ ನಗರದ ಅರಣ್ಯ ಇಲಾಖೆ ನರ್ಸರಿ ಎದುರು ಅಂಕೋಲಾ ಕಡೆಯಿಂದ ಯಲ್ಲಾಪುರ ಕಡೆಗೆ ಬರುತ್ತಿದ್ದ ಕ್ರೂಸರ್ ವಾಹನವನ್ನು ಅದರ ಚಾಲಕ ಅಭಿಷೇಕ ಸಹದೇವ ಹರಸಂಬಿ (25), ಅರಶಿನಗೇರಿ, ಮುಂಡಗೋಡ, ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದಿದ್ದ.
ಮುಂದೆ ಸಾಗುತ್ತಿದ್ದ ಯಾವುದೋ ವಾಹನವನ್ನು ಓವರ್‌ಟೇಕ್ ಮಾಡುವ ಭರದಲ್ಲಿ, ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆಗೆ ತೆರಳುತ್ತಿದ್ದ ಬೈಕ್‌ಗೆ ಕ್ರೂಸರ್ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಬೈಕ್‌ನ್ನು ಕಮ್ಮಾಣಿ, ಅಂಕೋಲಾ ನಿವಾಸಿ ಮಹೇಶ ಪರಮೇಶ್ವರ ಸಿದ್ದಿ (22) ಚಲಾಯಿಸುತ್ತಿದ್ದರು. ಅಪಘಾತದಲ್ಲಿ ಮಹೇಶ ಗಂಭೀರವಾಗಿ ಗಾಯಗೊಂಡಿದ್ದು, ಎರಡೂ ವಾಹನಗಳು ಜಖಂಗೊಂಡಿದ್ದವು.
ಈ ಸಂಬಂಧ ಗಾಯಾಳುವಿನ ಸಂಬಂಧಿ ದಾಮೋದರ ದೇವಿದಾಸ ಸಿದ್ದಿ (35), ಉದ್ಯಮನಗರ, ಯಲ್ಲಾಪುರ ನೀಡಿದ ದೂರಿನ ಆಧಾರದ ಮೇಲೆ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ, ಹುಬ್ಬಳ್ಳಿಯ ಕಿಮ್ಸ್‌ಗೆ ದಾಖಲಾಗಿದ್ದ ಮಹೇಶ ಪರಮೇಶ್ವರ ಸಿದ್ದಿ ಚಿಕಿತ್ಸೆ ಫಲಕಾರಿಯಾಗದೇ ಸೆ.14ರಂದು ಬೆಳಿಗ್ಗೆ ಮೃತಪಟ್ಟಿದ್ದಾನೆ.