ಯಲ್ಲಾಪುರ: ಪಟ್ಟಣದಲ್ಲಿ ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಪ್ರಕರಣವನ್ನು ಪೊಲೀಸರು ಪತ್ತೆಹಚ್ಚಿ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ ಪರಾರಿಯಾಗಿದ್ದು, ಶೋಧ ಕಾರ್ಯ ಮುಂದುವರಿದಿದೆ.
ಪೊಲೀಸರ ಮಾಹಿತಿ ಪ್ರಕಾರ, 02-03-2026ರಂದು ರಾತ್ರಿ 11.50 ಗಂಟೆ ಸುಮಾರಿಗೆ ಜೋಡುಕೆರೆ ಕ್ರಾಸ್ ಹತ್ತಿರ, ಕಲಘಟಗಿ ಕಡೆಯಿಂದ ಅಂಕೋಲಾ ಕಡೆಗೆ ಬರುತ್ತಿದ್ದ ಈಚರ್ ವಾಹನವನ್ನು ಪೊಲೀಸರು ತಡೆದು ಪರಿಶೀಲನೆ ನಡೆಸಿದರು. ವಾಹನದಲ್ಲಿ ಯಾವುದೇ ಪರವಾನಿಗೆ ಇಲ್ಲದೆ 12 ಹೋರಿಗಳು, 4 ಕೋಣಗಳು ಹಾಗೂ 3 ಎಮ್ಮೆಗಳು ಸೇರಿದಂತೆ ಒಟ್ಟು 19 ಜಾನುವಾರುಗಳನ್ನು ಕೇರಳ ರಾಜ್ಯಕ್ಕೆ ಸಾಗಿಸಲಾಗುತ್ತಿತ್ತು. ಜಾನುವಾರುಗಳನ್ನು ಹಗ್ಗದಿಂದ ಕಟ್ಟಿ, ಮಲಗಲು ಸಾಧ್ಯವಾಗದ ರೀತಿಯಲ್ಲಿ ತುಂಬಿಕೊಂಡು ಹಿಂಸಾತ್ಮಕವಾಗಿ ಸಾಗಿಸಲಾಗುತ್ತಿತ್ತು ಎಂದು ತಿಳಿದುಬಂದಿದೆ.
ಬಂಧಿತ ಆರೋಪಿ ಮಹಮ್ಮದ ರಫೀ (51), ಮೈಸೂರು ಮೂಲದ ಚಾಲಕನಾಗಿದ್ದು, ಮತ್ತೊಬ್ಬ ಆರೋಪಿ ದ್ಯಾನೇಶ (19) ಪರಾರಿಯಾಗಿದ್ದಾನೆ. ಪೊಲೀಸರು ಒಟ್ಟು 4.85 ಲಕ್ಷ ರೂ ಮೌಲ್ಯದ 19 ಜಾನುವಾರುಗಳನ್ನು ಹಾಗೂ KA-51/C-2013 ಸಂಖ್ಯೆಯ ಈಚರ್ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ವಾಹನದ ಮೌಲ್ಯವನ್ನು ಅಂದಾಜು 6 ಲಕ್ಷ ರೂ ಎಂದು ತಿಳಿಸಲಾಗಿದೆ.
ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಯಲ್ಲಾಪುರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.