ಕೆನರಾ ನೆಕ್ಸ್ಟ್-ನಿಮ್ಮ ಧ್ವನಿ
ಯಲ್ಲಾಪುರ: ಅಲ್ಲೆಲ್ಲೋ ಬೇಲಿ ಕಟ್ಟಲು ಮರದ ಒಂದೆರಡು ಟೊಂಗೆಗಳನ್ನು ಕಡಿದರೂ ಮನೆ ಬಾಗಿಲಿಗೆ ಬಂದು ಬೆದರಿಸುವ, ಕೇಸು ಹಾಕುತ್ತೇವೆಂದು ಹೇಳಿ ಸೆಟ್ಲ್‌ಮೆಂಟ್‌ಗೆ ನಿಲ್ಲುವ, ಬೆವರು ಸುರಿಸಿ ಆಳೆತ್ತರಕ್ಕೆ ಬೆಳೆಸಿದ ಅಡಕೆ ತೋಟವನ್ನು ಕರುಣೆಯಿಲ್ಲದೆ, ಕಾನೂನಿನ ಹೆಸರು ಹೇಳಿ ಕ್ಷಣಮಾತ್ರದಲ್ಲಿ ನೆಲಸಮ ಮಾಡುವ ಅರಣ್ಯ ಇಲಾಖೆಯ ಕೆಲ ಅಧಿಕಾರಿಗಳಿಗೆ ತಮ್ಮದೇ ಬೀಟ್ ವ್ಯಾಪ್ತಿಯಲ್ಲಿ ಇಂತಹ ಕಾನೂನು ಬಾಹಿರ ಕೆಲಸಗಳು ನಡೆಯುತ್ತಿದ್ದರೂ ಕ್ರಮ ಕೈಗೊಳ್ಳುವ ಮನಸ್ಸಿಲ್ಲವೇ ಅಥವಾ ಇದಕ್ಕೂ ಆಯಾ ಬೀಟ್ ವ್ಯಾಪ್ತಿಯಿಂದ ಇಂತಿಷ್ಟೆಂದು ತಿಂಗಳಿಗೆ ಸಂದಾಯವಾಗುತ್ತಿದೆಯೇ?
ಕೆಲ ಸಂದರ್ಭಗಳಲ್ಲಿ ಇಂತಹ ಪ್ರಶ್ನೆಗಳು ಮೂಡುತ್ತವೆ. ಕಾರಣವೂ ಇಲ್ಲದಿಲ್ಲ. ಉತ್ತರಕನ್ನಡ ಜಿಲ್ಲೆ ಪ್ರಾಕೃತಿಕ ಸಂಪತ್ತಿನ ವಿಷಯಕ್ಕೆ ಬಂದಾಗ ಅತ್ಯಂತ ಶ್ರೀಮಂತ ಜಿಲ್ಲೆಯಾಗಿತ್ತು. ಈಗಿಲ್ಲವೇ? ಖಂಡಿತಾ ಇಲ್ಲ. ಯಾಕೆಂದರೆ, ರಸ್ತೆಯಂಚಿನಿಂದ ಕಾಣುವಷ್ಟು ಅರಣ್ಯ ಶ್ರೀಮಂತಿಕೆ ಅದೇ ಕಾಡಿನ ಒಳಭಾಗದಲ್ಲಿಲ್ಲ. ಕಾರಣವನ್ನೇನೂ ಪ್ರತ್ಯೇಕವಾಗಿ ಹೇಳಬೇಕಿಲ್ಲ.
ಇದೀಗ ಮೂಡುತ್ತಿರುವ ಪ್ರಶ್ನೆ, ಯಾರೋ ಅಪರಿಚಿತರು, ಯಾವುದೋ ರೈತರ ಖಾಸಗಿ ಜಮೀನಿಗೆ ರಾತ್ರಿಯ ಸಮಯದಲ್ಲಿ ಅಕ್ರಮವಾಗಿ ಪ್ರವೇಶಿಸಿ, ಜಮೀನಿನ ತುಂಬೆಲ್ಲಾ ಓಡಾಡಿ, ಮೊಲ, ಕಾಡುಕುರಿ, ನವಿಲಿನಂತಹ ವನ್ಯ ಪ್ರಾಣಿಗಳ ಬೇಟೆಗಾಗಿ ಉರುಳು ಬಲೆ ಕಟ್ಟುವುದು ಅರಣ್ಯ ಇಲಾಖೆಯ ಕಾನೂನು ಪ್ರಕಾರ ಅಪರಾಧವಲ್ಲವಾ? ಅದೇ ಉರುಳಿನಲ್ಲಿ ಅದೇ ಜಮೀನಿನ ಮಾಲಕ ಸಾಕಿದ ಬೆಕ್ಕು, ನಾಯಿ ಇತ್ಯಾದಿ ಪ್ರಾಣಿಗಳು ಸಿಲುಕಿ ಪ್ರಾಣ ಬಿಟ್ಟರೆ ಅದಕ್ಕೆ ಹೊಣೆ ಯಾರು? ಅಥವಾ, ಶಿಕಾರಿಗೆಂದು ಕಾಡತೂಸನ್ನು ಹೆಗಲಿಗೇರಿಸಿ ನಡೆದರೆ, ಬೇಟೆಯಾಡಿದರೆ ಮಾತ್ರವೇ ಅಪರಾಧವಾಗುತ್ತದಾ ಎಂದು ಪ್ರಶ್ನಿಸಿದ್ದಾರೆ ಹೆಸರು ಬಹಿರಂಗಪಡಿಸಲು ಇಚ್ಛಿಸದ ನಮ್ಮ ಓದುಗರೊಬ್ಬರು.
ಕಾಡು ಪ್ರಾಣಿಗಳು ಸಾಮಾನ್ಯವಾಗಿ ಓಡಾಡುವ ಕಾಡು, ಜಮೀನುಗಳ ಆಯಕಟ್ಟಿನ ಜಾಗಗಳಲ್ಲಿ 2 ಅಡಿ ಅಂತರದಲ್ಲಿ ಚಿಕ್ಕದೊಂದು ಮರದ ಕಡ್ಡಿ ಹೂತು, ಅದಕ್ಕೆ ಕಣ್ಣಿಗೂ ಕಾಣದಷ್ಟು ತೆಳುವಾದ ತಂತಿಯನ್ನು ಕುಣಿಕೆಯಂತೆ ಹೆಣೆದು ಕಟ್ಟಿಡುವುದು ಈ ಉರುಳಿನ ತಂತ್ರ. ಆ ಜಾಗವನ್ನು ದಾಟಲು ಮುಂದಾದ ಮೊಲ, ಕಾಡುಕುರಿಯಂತಹ ಪ್ರಾಣಿಗಳು ತಂತಿಯ ಉರುಳಿನಲ್ಲಿ ಸಿಲುಕಿ ಸಾಯುತ್ತವೆ. ಗುಂಡಿನ ಸದ್ದಿಲ್ಲ, ಯಾರಿಗೋ ತಿಳಿದೀತೆಂಬ ಭಯವೂ ಇಲ್ಲ!
ಯಲ್ಲಾಪುರ ಅರಣ್ಯ ವ್ಯಾಪ್ತಿಯ ಬಿಸಗೋಡು, ವಜ್ರಳ್ಳಿ, ಇಡಗುಂದಿ, ನಂದೊಳ್ಳಿ, ಮಾಗೋಡು, ಮಂಚಿಕೇರಿ ಸೇರಿದಂತೆ ಅನೇಕ ಭಾಗಗಳಲ್ಲಿ ಇಂತಹ ಅಕ್ರಮಗಳು ನಡೆಯುತ್ತಿವೆ. ಹಳ್ಳಿಯಾದ್ದರಿಂದ ಇದನ್ನು ಪ್ರಶ್ನಿಸುವವರಿಲ್ಲ. ಜಮೀನಿನ ಯಜಮಾನನೇ ಈ ಬಗ್ಗೆ ದೂರು ನೀಡಲು ಹೋದರೆ ಅದು ಎಲ್ಲಿಂದೆಲ್ಲಿಗೆ ತಲುಪುತ್ತದೋ, ಸುಮ್ಮನೇ ಇಲ್ಲದ ರಗಳೆಯೇಕೆ ಎಂದು ಸುಮ್ಮನಿರುವವರೇ ಹೆಚ್ಚು. ಆದರೆ, ಅದೇ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದರೆ ಮಾಡದ ತಪ್ಪಿಗೆ ತೊಂದರೆ ಅನುಭವಿಸುವುದು ಮಾತ್ರ ಈ ನಿರಪರಾಧಿ ಕೃಷಿಕ ಅಲ್ಲವೇ?!
ಆದರೆ, ಇಂಥದೇ ಉರುಳಿಗೆ ಸಣ್ಣಪುಟ್ಟ ಕಾಡು ಪ್ರಾಣಿಗಳಷ್ಟೇ ಅಲ್ಲದೆ, ಚಿರತೆಯಂತಹ ಪ್ರಾಣಿಗಳು ಸಿಕ್ಕು ಪ್ರಾಣ ಬಿಟ್ಟ ಪ್ರಕರಣಗಳೂ ನಮ್ಮ ಜಿಲ್ಲೆಯಲ್ಲಿಯೇ ನಡೆದಿದ್ದಿದೆ. ಇಂತಹ ಅಕ್ರಮಗಳ ಬಗ್ಗೆ ಗಮನವಿಡುವುದು, ದೂರು ನೀಡಿದರಷ್ಟೇ ಕ್ರಮ ಕೈಗೊಳ್ಳುತ್ತೇವೆ ಎಂದು ನುಣುಚಿಕೊಳ್ಳದಿರುವುದು ಕೂಡ ಅರಣ್ಯ ಇಲಾಖೆಯ ಅಧಿಕಾರಿಗಳ ಕರ್ತವ್ಯವಲ್ಲವೇ? ಉತ್ತರಿಸುವಷ್ಟು ಪುರುಸೊತ್ತು ಇಲಾಖೆಯ ಅಧಿಕಾರಿಗಳಿಗೆ ಇದೆಯೆಂದಾದರೆ, ಇಂತಹ ʻದೇಸೀ ಬೇಟೆʼಗಳನ್ನು ತಡೆಯುವ ಕುರಿತೂ ಸೂಕ್ತ ಕ್ರಮಗಳಾಗಲಿ ಎಂಬುದು ನಮ್ಮ ಆಶಯ.
ಆತ್ಮೀಯರೇ, ಇದು ಕೆನರಾ ನೆಕ್ಸ್ಟ್‌ನ ಆಶಯ. ಕೇವಲ ಸುದ್ದಿಯಷ್ಟೇ ಅಲ್ಲದೆ, ಜನರ ಧ್ವನಿಯಾಗುವುದು ನಮ್ಮ ಉದ್ದೇಶ. ಇಂತಹ ವಿಷಯಗಳು, ಅಕ್ರಮಗಳು, ಕುಂದು-ಕೊರತೆಗಳು, ಆಡಳಿತದ ವೈಫಲ್ಯಗಳು, ಸಾರ್ವಜನಿಕ ಸಮಸ್ಯೆಗಳು ನಿಮ್ಮ ಗಮನಕ್ಕೆ ಬಂದರೆ ನಮಗೂ ತಿಳಿಸಿ. ನೀವು ಬಯಸದಿದ್ದರೆ ನಿಮ್ಮ ಹೆಸರನ್ನು ಎಲ್ಲಿಯೂ, ಯಾರಲ್ಲಿಯೂ ನಾವು ಉಲ್ಲೇಖಿಸುವುದಿಲ್ಲ. ಸಮಸ್ಯೆ ಸಂಬಂಧಿತ ಅಧಿಕಾರಿಗಳಿಗೆ ತಲುಪಲಿ, ಸೂಕ್ತ ಕ್ರಮವಾಗಲಿ ಎಂದು ನಾವು ಬಯಸುತ್ತೇವೆ.