Friday, October 23, 2026
HomeLocal Newsಯಲ್ಲಾಪುರ | ಶಾರದಾಂಬೆಯ ಸನ್ನಿಧಿಯಲ್ಲಿ ಶರನ್ನವರಾತ್ರಿ

ಯಲ್ಲಾಪುರ | ಶಾರದಾಂಬೆಯ ಸನ್ನಿಧಿಯಲ್ಲಿ ಶರನ್ನವರಾತ್ರಿ

ಯಲ್ಲಾಪುರ: ಶರದೃತುವಿನ ಪುಣ್ಯಕಾಲದಲ್ಲಿ ಶ್ರೀಮಾತೆಯ ಆರಾಧನೆಯೊಂದಿಗೆ ವೈದಿಕ ಕರ್ಮಾನುಷ್ಠಾನ, ಸಪ್ತಶತಿ ಪಾರಾಯಣ, ಚಂಡಿಕಾ ಯಾಗ, ಕುಂಕುಮಾರ್ಚನೆ ಹಾಗೂ ವೇದಪಾರಾಯಣ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಯಲ್ಲಾಪುರದ ನಾಯಕನಕೆರೆಯ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀ ಬಾಲಾತ್ರಿಪುರ ಸುಂದರೀ ಶ್ರೀ ಶಾರದಾಂಬಾ ದೇವಸ್ಥಾನ ಹಾಗೂ ಶ್ರೀ ಹನುಮಂತ ದೇವಸ್ಥಾನದಲ್ಲಿ ಶರನ್ನವರಾತ್ರಿ ಉತ್ಸವ ನಡೆಯಲಿದೆ.

ಅಕ್ಟೋಬರ್ 11ರ ಭಾನುವಾರದಿಂದ ಅಕ್ಟೋಬರ್ 20ರ ಮಂಗಳವಾರದವರೆಗೆ ನಡೆಯಲಿರುವ ನವರಾತ್ರಿ ಉತ್ಸವವು ವಿಜಯದಶಮಿ ಪೂಜೆಯೊಂದಿಗೆ ಸಂಪನ್ನಗೊಳ್ಳಲಿದೆ. ದುಷ್ಟಶಕ್ತಿಯ ಸಂಹಾರಕಳಾಗಿ, ಆಪತ್ತಿನಿಂದ ರಕ್ಷಿಸುವವಳಾಗಿ ಹಾಗೂ ಸದ್ವಿದ್ಯೆಯನ್ನು ಕರುಣಿಸುವ ತ್ರಿಗುಣಾತ್ಮಿಕಾ ಸ್ವರೂಪಿಣಿ ಶ್ರೀಮಹಾಕಾಳಿ, ಮಹಾಲಕ್ಷ್ಮಿ ಹಾಗೂ ಮಹಾಸರಸ್ವತಿಯ ಆರಾಧನೆಗೆ ಶರದೃತುವನ್ನು ಪುಣ್ಯಕಾಲವೆಂದು ಪರಿಗಣಿಸಲಾಗುತ್ತದೆ.

ಈ ಹಿನ್ನೆಲೆ ನವರಾತ್ರಿ ದಿನಗಳಲ್ಲಿ ದೇವಾಲಯದಲ್ಲಿ ವೈದಿಕ ಕರ್ಮಾನುಷ್ಠಾನದೊಂದಿಗೆ ಸಪ್ತಶತಿ ಪಾರಾಯಣ, ಚಂಡಿಕಾ ಯಾಗ, ಕುಂಕುಮಾರ್ಚನೆ ಹಾಗೂ ವೇದಪಾರಾಯಣ ನಡೆಯಲಿದೆ.

ಭಕ್ತರು ವಿವಿಧ ಧಾರ್ಮಿಕ ಸೇವೆಗಳಲ್ಲಿ ಪಾಲ್ಗೊಳ್ಳಲು ತಮ್ಮ ಹೆಸರುಗಳನ್ನು ನೋಂದಾಯಿಸಿಕೊಂಡು, ಪೂಜಾ ಸಮಯದಲ್ಲಿ ಉಪಸ್ಥಿತರಿದ್ದು ದೇವಿಯ ಸೇವೆಯಲ್ಲಿ ಭಾಗಿಯಾಗುವಂತೆ ದೇವಸ್ಥಾನದ ವತಿಯಿಂದ ಮನವಿ ಮಾಡಲಾಗಿದೆ.

ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ರಾತ್ರಿ 8 ಗಂಟೆಗೆ ಮಹಾಪೂಜೆ ನೆರವೇರಲಿದೆ. ರಾತ್ರಿ 8.45ಕ್ಕೆ ಪ್ರಸಾದ ಭೋಜನದ ವ್ಯವಸ್ಥೆ ಇರಲಿದೆ. ವೈದಿಕ ಅನುಷ್ಠಾನಗಳ ಹಿನ್ನೆಲೆಯಲ್ಲಿ ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 7.45ರವರೆಗೆ ಮಾತ್ರ ದೇವಾಲಯದಲ್ಲಿ ಪೂಜಾ ಸೇವೆಗೆ ಅವಕಾಶವಿರುತ್ತದೆ ಎಂದು ತಿಳಿಸಲಾಗಿದೆ.

ಅಕ್ಟೋಬರ್ 15ರ ಗುರುವಾರ, ಲಲಿತಾ ಪಂಚಮಿಯಂದು ವಿಶೇಷ ಚಂಡಿಕಾ ಯಾಗ ನಡೆಯಲಿದೆ. ಅಕ್ಟೋಬರ್ 20ರ ವಿಜಯದಶಮಿಯಂದು ಬೆಳಿಗ್ಗೆ 10 ಗಂಟೆಗೆ ವಿದ್ಯಾಧಿದೇವತೆಯ ಸನ್ನಿಧಿಯಲ್ಲಿ ಮಕ್ಕಳಿಗಾಗಿ ವಿಶೇಷ ಅಕ್ಷರಾರಂಭ ಕಾರ್ಯಕ್ರಮ ನಡೆಯಲಿದೆ.

ಚಂಡೀ ಪಾರಾಯಣ ಸೇವೆ ಸಲ್ಲಿಸಲು ಇಚ್ಛಿಸುವ ಭಕ್ತರು ತಮ್ಮ ಹಾಗೂ ಕುಟುಂಬದ ಗೋತ್ರ, ನಕ್ಷತ್ರ ಮತ್ತು ರಾಶಿಯ ವಿವರಗಳೊಂದಿಗೆ ಕನಿಷ್ಠ ನಾಲ್ಕು ದಿನ ಮುಂಚಿತವಾಗಿ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ತಿಳಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಮುಖ್ಯ ಅರ್ಚಕ ವಿ. ಗೋಪಾಲಕೃಷ್ಣ ಭಟ್ಟ 9449625565 ಹಾಗೂ ವ್ಯವಸ್ಥಾಪಕ ಎನ್.ಎಸ್. ಭಟ್ಟ 9483279791 ಅವರನ್ನು ಸಂಪರ್ಕಿಸಬಹುದು ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

Recent Comments

error: Content is protected !!
Share