ಜೋಯಿಡಾ: ಚಹಾ ಹಾಗೂ ಸಿಗರೇಟಿನ ಬಾಕಿ ಹಣ ಕೇಳಿದ ವಿಚಾರಕ್ಕೆ ವ್ಯಕ್ತಿಯೊಬ್ಬ ಚಹಾ ಅಂಗಡಿ ಮಾಲೀಕನ ತಲೆಗೆ ಕಲ್ಲಿನಿಂದ ಹೊಡೆದು ಗಾಯಗೊಳಿಸಿರುವ ಕುರಿತು ರಾಮನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರಂಬಳದ ಅನಮೋಡ ನಿವಾಸಿ ನಿತೇಶ ಗೋಪಾಲ ಗಾವಡೆ (32) ಅವರು ರಾಮನಗರದ ಶಿವಾಜಿ ವೃತ್ತದಲ್ಲಿ ‘ಜಗದಂಬಾ ಟೀ ಸ್ಟಾಲ್’ ನಡೆಸುತ್ತಿದ್ದಾರೆ. ರಾಮನಗರದ ಕೆಪಿಸಿ ಕಾಲೋನಿ ನಿವಾಸಿ ವಿಠ್ಠಲ ಗವಳಿ ಎಂಬಾತ ಅಂಗಡಿಗೆ ಬಂದು ಚಹಾ ಕುಡಿದು ಸಿಗರೇಟು ಸೇದುತ್ತಿದ್ದು, ಈ ಸಂಬಂಧ ರೂ.50 ಬಾಕಿ ಉಳಿದಿತ್ತು ಎಂದು ನಿತೇಶ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಅಕ್ಟೋಬರ್ 7ರಂದು ರಾತ್ರಿ ಸುಮಾರು 10.30ರ ವೇಳೆಗೆ ವಿಠ್ಠಲ ಗವಳಿ ಬೈಕ್ನಲ್ಲಿ ಅಂಗಡಿಯ ಬಳಿ ಬಂದಿದ್ದಾನೆ. ಇದೇ ಸಂದರ್ಭದಲ್ಲಿ ನಿತೇಶ ಮಾರವಾಡಿ ಅಂಗಡಿಯಿಂದ ಸಾಮಾನುಗಳನ್ನು ತೆಗೆದುಕೊಂಡು ತಮ್ಮ ಅಂಗಡಿಯತ್ತ ಬರುತ್ತಿದ್ದರು. ಆಗ ಬಾಕಿ ಹಣ ಕೇಳಿದ ಅವರು, ತಮಾಷೆಗೆ ಬೈಕ್ನ ಚಾವಿಯನ್ನು ತೆಗೆದುಕೊಂಡಿದ್ದಾರೆ.
ವಿಠ್ಠಲ ಬೈಕ್ನ ಚಾವಿಯನ್ನು ಕೇಳಿದಾಗ ನಿತೇಶ ಅವರು ಸ್ವಲ್ಪ ಸಮಯ ಚಾವಿ ನೀಡದೆ ಬಳಿಕ ವಾಪಸ್ ನೀಡಿದ್ದಾರೆ. ನಂತರ ನಿತೇಶ ಅವರು ತಮ್ಮ ಅಂಗಡಿಯತ್ತ ಬರುತ್ತಿದ್ದಾಗ ವಿಠ್ಠಲ ರಸ್ತೆಯಲ್ಲಿದ್ದ ಕಲ್ಲನ್ನು ತೆಗೆದುಕೊಂಡು ಎಸೆದಿದ್ದಾನೆ. ಕಲ್ಲು ನಿತೇಶ ಅವರ ತಲೆಯ ಹಿಂಭಾಗಕ್ಕೆ ಬಡಿದು ಗಾಯವಾಗಿದ್ದು, ರಕ್ತಸ್ರಾವವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ತಮಾಷೆ ಮಾಡಿದ್ದಕ್ಕೆ ಕಲ್ಲಿನಿಂದ ಹೊಡೆಯುವುದೇಕೆ ಎಂದು ನಿತೇಶ ಪ್ರಶ್ನಿಸಿದಾಗ ವಿಠ್ಠಲ ಅವಾಚ್ಯವಾಗಿ ನಿಂದಿಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಬಳಿಕ ನಿತೇಶ ರಾಮನಗರದ ಸರ್ಕಾರಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ.
ತಮ್ಮ ಮೇಲೆ ಹಲ್ಲೆ ನಡೆಸಿದ ವಿಠ್ಠಲ ಗವಳಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ನಿತೇಶ ಗಾವಡೆ ನೀಡಿದ ದೂರಿನ ಆಧಾರದ ಮೇಲೆ ರಾಮನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.


