ಯಲ್ಲಾಪುರ: ತಾಲೂಕು ಆಸ್ಪತ್ರೆಯಲ್ಲಿ ನಡೆದ NQAS (ರಾಷ್ಟ್ರೀಯ ಗುಣಮಟ್ಟದ ಭರವಸೆ ಮಾನದಂಡಗಳು) ಮೌಲ್ಯಮಾಪನದಲ್ಲಿ ಆಸ್ಪತ್ರೆ ಶೇ.80ರಷ್ಟು ಅಂಕ ಗಳಿಸುವ ಮೂಲಕ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದೆ.
ತಾಲೂಕು ಆಸ್ಪತ್ರೆಯ NQAS ಮೌಲ್ಯಮಾಪನವು ಏ.28, 2026ರಂದು ನಡೆದಿತ್ತು. ರಾಜ್ಯಮಟ್ಟದ ಮೌಲ್ಯಮಾಪನದ ಭಾಗವಾಗಿ ಆಸ್ಪತ್ರೆಯ 12 ವಿಭಾಗಗಳನ್ನು ಪರಿಶೀಲಿಸಲಾಗಿತ್ತು. ಇದರ ಫಲಿತಾಂಶ ಸೆ.21ರಂದು ಪ್ರಕಟವಾಗಿದ್ದು, ಯಲ್ಲಾಪುರ ತಾಲೂಕು ಆಸ್ಪತ್ರೆಯು ಶೇ.80ರಷ್ಟು ಅಂಕ ಗಳಿಸಿದೆ.
ಆಸ್ಪತ್ರೆಯ ಎಲ್ಲ ತಜ್ಞ ವೈದ್ಯರು, ವೈದ್ಯಾಧಿಕಾರಿಗಳು, ಅಧಿಕಾರಿಗಳು ಹಾಗೂ ಸಿಬ್ಬಂದಿಯ ಸಹಕಾರ ಮತ್ತು ಕಠಿಣ ಪರಿಶ್ರಮದಿಂದ ಉತ್ತಮ ಫಲಿತಾಂಶ ದೊರೆತಿದೆ ಎಂದು ತಾಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ನರೇಂದ್ರ ಪವಾರ್ ತಿಳಿಸಿ, ಎಲ್ಲ ವೈದ್ಯಾಧಿಕಾರಿಗಳು, ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಶುಭಾಶಯ ತಿಳಿಸಿದ್ದಾರೆ.
ಸೆ.18ರಂದು ಆಸ್ಪತ್ರೆಯ ಉಪನಿರ್ದೇಶಕರು ಹಾಗೂ ಉತ್ತರ ಕನ್ನಡ ಜಿಲ್ಲೆಯ ಶಿರಸಿ ವಿಭಾಗದ ನೋಡಲ್ ಅಧಿಕಾರಿ ಡಾ. ರಾಜಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸಂಜಯ ದೊಡ್ಡಮನಿ ಹಾಗೂ ಜಿಲ್ಲಾ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಆಸ್ಪತ್ರೆಯ ಎಲ್ಲ ವಿಭಾಗಗಳನ್ನು ಪರಿಶೀಲಿಸಿ, ಆಸ್ಪತ್ರೆಯ ಸ್ವಚ್ಛತೆ ಹಾಗೂ ಸಿಬ್ಬಂದಿಯ ಜ್ಞಾನ, ಮಾಹಿತಿ ಮತ್ತು ಅರಿವಿನ ಕುರಿತು ಪರಿಶೀಲನೆ ನಡೆಸಿ ಪ್ರಶಂಸೆ ವ್ಯಕ್ತಪಡಿಸಿದ್ದರು.


