ಯಲ್ಲಾಪುರ: ಕನ್ನಡ ಜಿಲ್ಲೆಯ ಜನರ ಮನಸ್ಥಿತಿ ಮೊದಲಿನಿಂದಲೂ ಹಾಗೆಯೇ. ತಾವಾಯಿತು, ತಮ್ಮ ಕೆಲಸವಾಯಿತು ಎಂಬಂತೆ ತಮ್ಮಷ್ಟಕ್ಕೆ ತಾವು ಇರುವದರಿಂದಲೇ ಇತರ ಪ್ರದೇಶಗಳಿಗಿಂತ ಭಿನ್ನವಾಗಿ ತೋರುತ್ತದೆ. ಅದರಲ್ಲೂ, ಗುಡ್ಡಗಾಡುಗಳಿಂದ ಕೂಡಿದ, ಕೃಷಿಕರೇ ಹೆಚ್ಚಾಗಿರುವ ಯಲ್ಲಾಪುರ ತಾಲ್ಲೂಕು ಸಾಮಾನ್ಯವಾಗಿ ಶಾಂತ ಸ್ವಭಾವದ ಸಾರ್ವಜನಿಕರಿಂದಲೇ ಗುರುತಿಸಿಕೊಳ್ಳುತ್ತದೆ.
ಆದರೆ, ಇತ್ತೀಚಿನ ದಿನಗಳಲ್ಲಿ ಯಲ್ಲಾಪುರದಲ್ಲಿ ಕೆಲ ವ್ಯಕ್ತಿಗಳು ವಿವಿಧ ಸಂಘ-ಸಂಸ್ಥೆಗಳ, ಸಂಘಟನೆಗಳ ಹೆಸರು ಹೇಳಿಕೊಂಡು ಸಾರ್ವಜನಿಕರನ್ನು ಬೆದರಿಸುವುದು, ಹಣಕ್ಕೆ ಬೇಡಿಕೆ ಇಡುವುದು, ಕೊಡದಿದ್ದರೆ ಪ್ರಕರಣ ದಾಖಲಿಸುತ್ತೇವೆ ಎಂದು ಒತ್ತಡ ಹಾಕುವ ಕೆಲಸ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ.
ರೈತರ ಜಮೀನಿನ ಬಳಿ ಜೆಸಿಬಿ ಯಂತ್ರ ಕೆಲಸ ಮಾಡುತ್ತಿದ್ದರೆ, “ನೀವು ಅರಣ್ಯ ಭೂಮಿ ಒತ್ತುವರಿ ಮಾಡಿದ್ದೀರಿ, ಅರಣ್ಯ ಅಧಿಕಾರಿಗಳ ಬಳಿ ದೂರು ಕೊಡುತ್ತೇವೆ” ಎಂದು ಒತ್ತಡ ಹಾಕುವುದು, ರೆಸಾರ್ಟ್ ಅಥವಾ ಹೋಮ್‌ಸ್ಟೇ ನಡೆಸುವವರ ಬಳಿ ಹೋಗಿ ʻನೀವು ನಿಮ್ಮ ರೆಸಾರ್ಟ್‌ನಲ್ಲಿ ಕಾನೂನುಬಾಹಿರ ಚಟುವಟಿಕೆ ನಡೆಸುತ್ತಿದ್ದೀರಿʼ ಎಂದು ಆರೋಪ ಹೊರಿಸುವುದು, ಹೊಸ ಉದ್ಯಮ ಆರಂಭಿಸಿದವರಿಗೆ “ನೀವು ನಿಮ್ಮ ಉದ್ಯಮದ ಚೌಕಟ್ಟು ಮೀರಿ ವ್ಯವಹಾರ ನಡೆಸುತ್ತಿದ್ದೀರಿ, ಈ ಬಗ್ಗೆ ಪೊಲೀಸ್ ಕೇಸ್ ಮಾಡಿಸುತ್ತೇವೆ” ಎಂಬ ಬೆದರಿಕೆಯೊಡ್ಡುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಇವರೆಲ್ಲರೂ ವಿದ್ಯಾವಂತರೇ. ಆದರೆ, ಮಾಡುತ್ತಿರುವುದು ಮಾತ್ರ ಅನಾಚಾರದ ಕೆಲಸ. ಮೈಬಗ್ಗಿಸಿ ದುಡಿಯದೇ ಆದಾಯ ಗಳಿಕೆಗೆ ಸುಲಭದ ದಾರಿ ಹುಡುಕಿಕೊಂಡಿದ್ದಾರೆ. ಪಟ್ಟಣದ ರವೀಂದ್ರನಗರದ ಒಂದು ಸ್ಥಳ ಇವರ ಖಾಯಂ ವಿಳಾಸ. ನಿತ್ಯವೂ ನಿಗದಿತ ಸಮಯದಲ್ಲಿ ಎಲ್ಲರೂ ಸೇರಿ ನಾಳೆ ಯಾರ ಮೇಲೆ ಗೂಬೆ ಕೂರಿಸಿ ಹಣ ಸುಲಿಯುವುದು ಎನ್ನುವ ಬಗ್ಗೆ ಮೀಟಿಂಗ್ ನಡೆಯುತ್ತದೆ. ಮರುದಿನ ಬೆಳಿಗ್ಗೆ ಬೇರೆ ಬೇರೆ ಸಂಘಟನೆಗಳ ಹೆಸರು ಹೇಳಿ ವಸೂಲಿಗಿಳಿಯುತ್ತಾರೆ, ಇವರಿಗೆ ಕೆಲ ರಾಜಕೀಯ ವ್ಯಕ್ತಿಗಳ, ಅಧಿಕಾರಿಗಳ ಅಭಯವೂ ಇದೆ ಎಂಬ ಮಾತುಗಳೂ ಕೇಳತೊಡಗಿವೆ.
ನೆನಪಿಡಿ, ನೀವು ಕಾನೂನು ಪಾಲನೆ ಮಾಡಿಕೊಂಡಿದ್ದರೆ ಯಾರ ಬೆದರಿಕೆಗೂ ಒಳಗಾಗಬೇಕಾಗಿಲ್ಲ. ಪಟ್ಟಣವಾಗಲಿ, ಗ್ರಾಮೀಣ ಪ್ರದೇಶವೇ ಆಗಲಿ, ಯಾರಾದರೂ ಹಣಕ್ಕೆ ಬೇಡಿಕೆ ಇಟ್ಟರೆ ಅಥವಾ ಬೆದರಿಸಿದರೆ ಸಾಧ್ಯವಾದಲ್ಲಿ ಸಾಕ್ಷ್ಯ(ಆಡಿಯೋ/ವೀಡಿಯೋ) ಸಂಗ್ರಹಿಸಿ.
ನಿಮ್ಮ ಬಳಿ ಬಂದವರು ಯಾರು, ಯಾವ ಸಂಘಟನೆಯವರು, ಅದು ನೋಂದಾಯಿತ ಸಂಘಟನೆಯೇ, ಇದರ ಬಗ್ಗೆ ಅವರಲ್ಲಿ ದಾಖಲೆಗಳಿವೆಯೇ ಇವೆಲ್ಲವನ್ನೂ ಪ್ರಶ್ನಿಸುವ ಹಕ್ಕು ನಿಮಗೂ ಇದೆ. ನೀವು ತಪ್ಪು ಮಾಡಿದ್ದೇ ಆದರೆ ಇಲಾಖೆಯೇ ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತದೆ. ಆದರೆ, ಇಂತಹ ಕಿತ್ತು ತಿನ್ನುವವರು ಪ್ರಶ್ನಿಸುವ ಅಗತ್ಯವಿಲ್ಲ. ಹತ್ತಿರದ ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಿ. ಅರಣ್ಯ ಇಲಾಖೆ ಅಥವಾ ಸಂಬಂಧಿತ ಅಧಿಕಾರಿಗಳನ್ನು ನೇರವಾಗಿ ಸಂಪರ್ಕಿಸಿ.
ಯಾರನ್ನಾದರೂ ಬೆದರಿಸಿ ಹಣಕ್ಕೆ ಬೇಡಿಕೆ ಇಡುವುದು ಭಾರತೀಯ ದಂಡ ಸಂಹಿತೆ ಪ್ರಕಾರ ಗಂಭೀರ ಅಪರಾಧ. ಕೇಸ್ ಹಾಕುತ್ತೇವೆ, ನಿಮ್ಮನ್ನು ಸಿಲುಕಿಸುತ್ತೇವೆ ಎಂಬ ಮಾತುಗಳಿಂದ ಭಯ ಹುಟ್ಟಿಸುವುದು ಕ್ರಿಮಿನಲ್ ಅಪರಾಧವಾಗುತ್ತದೆ. ಬೆದರಿಕೆ ಮೂಲಕ ಹಣ ವಸೂಲಿ ಮಾಡುವ ಪ್ರಯತ್ನ ದಬ್ಬಾಳಿಕೆ (Extortion) ಎಂದು ಪರಿಗಣಿಸಲಾಗುತ್ತದೆ. ಸುಳ್ಳು ದೂರು ಕೊಡುವುದು ಸಹ ಶಿಕ್ಷಾರ್ಹ.
ಯಲ್ಲಾಪುರದಂತಹ ಶಾಂತ ಪ್ರದೇಶದಲ್ಲಿ ಇಂತಹ ಅನಧಿಕೃತ ದಬ್ಬಾಳಿಕೆ ಮುಂದುವರಿದರೆ, ಅದು ಸಾಮಾಜಿಕ ಶಾಂತಿಗೆ ಧಕ್ಕೆ ತರುತ್ತದೆ. ಸಾರ್ವಜನಿಕರು ಒಗ್ಗಟ್ಟಿನಿಂದ ನಿಲ್ಲುವುದು, ಕಾನೂನು ಅರಿವು ಬೆಳೆಸುವುದು ಮತ್ತು ತಪ್ಪು ಚಟುವಟಿಕೆಗಳನ್ನು ಧೈರ್ಯವಾಗಿ ಎದುರಿಸುವುದು ಅಗತ್ಯ.
ಭಯಪಟ್ಟು ಹಣ ಕೊಡುವುದು ಸಮಸ್ಯೆಗೆ ಶಾಶ್ವತ ಪರಿಹಾರವಲ್ಲ. ಕಾನೂನುಬದ್ಧವಾಗಿ ನಡೆದುಕೊಂಡಿದ್ದರೆ, ಯಾರ ಬೆದರಿಕೆಗೂ ತಲೆಬಾಗಬೇಕಾಗಿಲ್ಲ. ಇಂತಹ ವ್ಯಕ್ತಿಗಳು ಇನ್ನಷ್ಟು ಮುಂದುವರೆಯುವ ಮುನ್ನ ತಾಲೂಕಿನ ಜನರೇ ಪಾಠ ಕಲಿಸುವಂತಾಗಲಿ.