Friday, July 24, 2026
Join WhatsApp Group
HomeInformationಸ್ವಾವಲಂಬಿ ರೈತರ ಆಸರೆ ಕುಸುಮ್-ಬಿ

ಸ್ವಾವಲಂಬಿ ರೈತರ ಆಸರೆ ಕುಸುಮ್-ಬಿ

ನೀರಾವರಿ ಚಟುವಟಿಕೆಗಳಿಗೆ ಸಬ್ಸಿಡಿ ದರದಲ್ಲಿ ಸೌರ ಪಂಪ್‌ಸೆಟ್

ರೈತರಿಗೆ ಹಗಲು ವೇಳೆಯಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ನಿರಂತರವಾಗಿ ನೀರಾವರಿ ಸೌಕರ್ಯವನ್ನು ಒದಗಿಸುವ ಮಹತ್ವಾಕಾಂಕ್ಷಿ ಉದ್ದೇಶದ ಸೋಲಾರ್ ಪಂಪ್‌ಸೆಟ್ ಯೋಜನೆ, ಕುಸುಮ್-ಬಿಯನ್ನು ರಾಜ್ಯ ಸರ್ಕಾರವು ಜಾರಿಗೆ ತಂದಿದ್ದು, ಈ ಯೋಜನೆಯ ಮೂಲಕ ರೈತರು ಅತೀ ಕಡಿಮೆ ವೆಚ್ಚದಲ್ಲಿ ಮತ್ತು ಸಬ್ಸಿಡಿ ದರದಲ್ಲಿ ಸೌರ ಪಂಪ್‌ಸೆಟ್‌ಗಳನ್ನು ಪಡೆಯುವ ಮೂಲಕ ನಿರಾಂತಕವಾಗಿ ಕೃಷಿ ಚುಟುವಟಿಕೆಗಳನ್ನು ಕೈಗೊಳ್ಳಬಹುದು.

ನೀರಾವರಿಗೆ ಸಾಂಪ್ರದಾಯಿಕ ವಿದ್ಯುತ್ ಅವಲಂಬನೆಯನ್ನು ಕಡಿಮೆ ಮಾಡಿ, ಸೌರಶಕ್ತಿಯ ಬಳಕೆ ಮೂಲಕ ರೈತರು ಸ್ವಾವಲಂಬನೆ ಸಾಧಿಸಲು ಕುಸುಮ್ ಬಿ ಯೊಜನೆ ರೂಪಿಸಲಾಗಿದ್ದು, ಈ ಯೋಜನೆಯ ಮೂಲಕ ಕೃಷಿ ಕ್ಷೇತ್ರವನ್ನು ಲಾಭದಾಯಕವಾಗಿಸಲು ಮತ್ತು ಸೌರಶಕ್ತಿ ಬಳಕೆಯ ಉತ್ತೇಜಿಸಲು ಸರ್ಕಾರದಿಂದ ಶೇ. 80ರಷ್ಟು ಸಹಾಯಧನ ನೀಡಲಾಗುತ್ತಿದೆ.

 ಈ ಯೋಜನೆಯಡಿ ಜಾಲ ಮುಕ್ತ ಸೌರ ಕೃಷಿ ಪಂಪ್‌ಸೆಟ್ ಅಳವಡಿಸಲು ಒತ್ತು ನೀಡಿ ರಾಜ್ಯ ಸರ್ಕಾರವು ಸಬ್ಸಿಡಿ ಮೊತ್ತವನ್ನು ಶೇ. 30ರಿಂದ ಶೇ. 50ಕ್ಕೆ ಹೆಚ್ಚಿಸಿದ್ದು, ರೈತರಿಗೆ ಸೌರ ಫಲಕಗಳು, ಸಬ್ ಮರ್ಸಿಬಲ್/ಸರ್ಫೇಸ್ ಡಿಸಿ ಪಂಪ್‌ಗಳು, ಮೌಂಟಿಗ್ ಸ್ಟ್ರಕ್ಟರ್, ಪ್ಯಾನಲ್ ಬೋರ್ಡ್, ಪೈಪ್ ಮತ್ತು ಕೇಬಲ್ ಸರಬರಾಜು ಮಾಡಲಾಗುತ್ತದೆ.

 ರೈತರು 3 ಹೆಚ್.ಪಿ 5 ಹೆಚ್.ಪಿ, 7.5 ಹೆಚ್.ಪಿ ಮತ್ತು 10 ಹೆಚ್.ಪಿ ಸಾಮರ್ಥ್ಯದ ಸರ್ಫೇಸಬಲ್ ಸಬ್ ಮರ್ಸಿಬಲ್ ಸೌರ ಪಂಪ್‌ಸೆಟ್‌ಗಳನ್ನು ಅಳಡಿಸಿಕೊಳ್ಳಬಹುದಾಗಿದ್ದು, ಇದಕ್ಕೆ ತಗಲುವ ವೆಚ್ಚದಲ್ಲಿ ಶೇ. 80ರಷ್ಟು ಸಹಾಯಧನವನ್ನು ಸರ್ಕಾರ ಪಾವತಿಸಲಿದ್ದು, ಶೇ. 20ರಷ್ಟನ್ನು ಫಲಾನುಭವಿಗಳು ಪಾವತಿಸಬೇಕಿದೆ.

 ಈ ಸೌರ ಪಂಪ್‌ಸೆಟ್‌ಗಳ ಸ್ಥಾಪನೆ ಸುಲಭವಾಗಿದ್ದು, ದೀರ್ಘಕಾಲ ಬಾಳಿಕೆ ಬರುವ ಕಾರಣದಿಂದ ಗ್ರಾಮೀಣ ಪ್ರದೇಶಗಳಲ್ಲೂ ಸೌರ ತಂತ್ರಜ್ಞಾನ ಹೆಚ್ಚು ಜನಪ್ರಿಯವಾಗುತ್ತಿದೆ. ಸೌರ ಪಂಪ್‌ಸೆಟ್ ಬಳಕೆಯಿಂದ ಸುಮಾರು 8 ಗಂಟೆಗಳ ಕಾಲ ಹಗಲಿನ ವೇಳೆಯಲ್ಲಿ ಕೃಷಿ ಚಟುವಟಿಕೆಗಳಿಗೆ ವಿದ್ಯುತ್ ಪೂರೈಕೆಯಾಗಲಿದೆ. ಕೃಷಿ ಭೂಮಿಯಲ್ಲಿ ಅಳವಡಿಸಲಾಗುವ ಸೋಲಾರ್ ಪಂಪ್‌ಗಳನ್ನು 5 ವರ್ಷಗಳ ಕಾಲ ಪೂರೈಕೆದಾರರೇ ಉಚಿತವಾಗಿ ನಿರ್ವಹಣೆ ಮಾಡಲಿದ್ದಾರೆ.

 ಅನಧಿಕೃತ ಪಂಪ್‌ಸೆಟ್‌ಗಳನ್ನು ಸಕ್ರಮಗೊಳಿಸುವ (UNIP) ಯೋಜನೆಯಡಿ ರೂ. 50ಕ್ಕಿಂತ ಹೆಚ್ಚಿನ ಮೊತ್ತವನ್ನು ಪಾವತಿಸಿ ರೈತರು ಅರ್ಜಿ ನೋಂದಾಯಿಸಿದಲ್ಲಿ, ಅಂತಹ ರೈತರ ನೀರಾವರಿ ಪಂಪ್‌ಸೆಟ್‌ಗೆ ಮೊದಲ ಆದ್ಯತೆಯನ್ನು ನೀಡಲಾಗುವುದು.

 ರೈತರು ತಮ್ಮ ಆಧಾರ್, ಆರ್.ಟಿ.ಸಿ ಮತ್ತು ಬ್ಯಾಂಕ್ ವಿವರಗಳೊಂದಿಗೆ ಆನ್‌ಲೈನ್ ಪೋರ್ಟಲ್ https://souramitra.com ಮೂಲಕ ನೊಂದಾಯಿಸಿಕೊಳ್ಳಬಹುದಾಗಿದೆ. ರೈತರ ನೋಂದಣಿ ಸಮಸ್ಯೆಯನ್ನು ಬಗೆಹರಿಸಲು ಕ್ರೆಡಲ್‌ನಲ್ಲಿ ಸಹಾಯವಾಣಿ ಸ್ಥಾಪಿಸಲಾಗಿದ್ದು, ದೂ.ಸಂ.080-22202100ನ್ನು ಮತ್ತು ಹೆಚ್ಚಿನ ಮಾಹಿತಿಗಾಗಿ ತಮ್ಮ ಸಮೀಪದ ಹೆಸ್ಕಾಂ ಕಚೇರಿಗಳನ್ನು ಸಂಪರ್ಕಿಸಬಹುದಾಗಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಕುಸುಮ್-ಬಿ ಯೋಜನೆಯ ಪ್ರಯೋಜನವನ್ನು ರೈತರಿಗೆ ದೊರಕಿಸುವ ನಿಟ್ಟಿನಲ್ಲಿ ಪ್ರತೀ ಗ್ರಾಮದಲ್ಲೂ ಹೆಸ್ಕಾಂ ವತಿಯಿಂದ ಅರಿವು ಮೂಡಿಸಲಾಗುತ್ತಿದೆ. ಈಗಾಗಲೇ ಈ ಯೋಜನೆಗೆ 78 ರೈತರು ಅರ್ಜಿ ಸಲ್ಲಿಸಿದ್ದು, ಇದುವರೆಗೆ 23 ರೈತರು ಸೋಲಾರ್ ಪಂಪ್‌ಸೆಟ್‌ಗಳನ್ನು ಅಳವಡಿಸಿಕೊಂಡಿದ್ದಾರೆ. ಉಳಿಕೆ ಅರ್ಜಿಗಳ ಪರಿಶೀಲನೆ ಕಾರ್ಯ ನಡೆಯುತ್ತಿದ್ದು, ಶೀಘ್ರದಲ್ಲಿ ಪೂರ್ಣಗೊಳ್ಳಲಿದೆ. ರೈತರು ಈ ಯೋಜನೆಗಾಗಿ ನೇರವಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಕೆ ಪ್ರಕ್ರಿಯೆಗಳ ಕುರಿತಂತೆ ಜಿಲ್ಲೆಯ ಎಲ್ಲಾ ಹೆಸ್ಕಾಂ ಕಚೇರಿಗಳಲ್ಲಿ ಅಗತ್ಯ ಸಹಕಾರ ನೀಡಲಾಗುತ್ತಿದ್ದು, ಅರಣ್ಯ ವ್ಯಾಪ್ತಿಯ ಗ್ರಾಮಗಳು ಮತ್ತು ಗುಡ್ಡಗಾಡು ಪ್ರದೇಶಗಳ ಗ್ರಾಮಗಳಲ್ಲಿನ ರೈತರು ಸೇರಿದಂತೆ ಜಿಲ್ಲೆಯ ರೈತರು ತಮ್ಮ ಜಮೀನಿನ ನೀರಾವರಿ ಸೌಕರ್ಯಗಳಿಗೆ ಸೋಲಾರ್ ಪಂಪ್ ಸೆಟ್ ಅಳವಡಿಸಿಕೊಳ್ಳುವ ಮೂಲಕ ವಿದ್ಯುತ್‌ನ ಕೊರತೆಯಾಗದಂತೆ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಬಹುದು ಎನ್ನುತ್ತಾರೆ ಹೆಸ್ಕಾಂ ಶಿರಸಿ ವೃತ್ತದ ಅಧೀಕ್ಷಕ ಇಂಜಿನಿಯರ್ ಪುರುಷೋತ್ತಮ ಮಲ್ಯ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share