ಹಾವು ಕಚ್ಚಿದರೆ ಎಲ್ಲಾ ಸಂದರ್ಭದಲ್ಲೂ ಮನೆಗೆ ಬಂದು ASV ಇಂಜೆಕ್ಷನ್ ಕೊಡುವುದಿಲ್ಲ!
ಮಳೆಗಾಲ ಆರಂಭವಾಗುತ್ತಿದ್ದಂತೆ ಹಾವು ಕಡಿತದ ಪ್ರಕರಣಗಳು ಹೆಚ್ಚಾಗುತ್ತಿರುವ ನಡುವೆ ವಾಟ್ಸಾಪ್ ಸೇರಿದಂತೆ ಸೋಶಿಯಲ್ ಮೀಡಿಯಾಗಳಲ್ಲಿ ಒಂದು ಸಂದೇಶ ವ್ಯಾಪಕವಾಗಿ ಹರಿದಾಡುತ್ತಿದೆ.
“ಹಾವು ಕಚ್ಚಿದರೆ 108ಕ್ಕೆ ಕರೆ ಮಾಡಿ. ಅವರು ನಿಮ್ಮ ಮನೆಗೆ ಬಂದು ಹಾವು ಕಡಿತದ ಇಂಜೆಕ್ಷನ್ ನೀಡುತ್ತಾರೆ. ನೀವು ಅಪಾಯದಿಂದ ಪಾರಾಗುತ್ತೀರಿ. ಈ ಮಾಹಿತಿಯನ್ನು ಎಲ್ಲರಿಗೂ ಹಂಚಿಕೊಳ್ಳಿ“ ಎಂಬ ಈ ಸಂದೇಶವನ್ನು ಸಾವಿರಾರು ಜನರು ಕುರುಡಾಗಿ ಫಾರ್ವರ್ಡ್ ಮಾಡುತ್ತಿದ್ದಾರೆ. ಆದರೆ ಈ ಸಂದೇಶದಲ್ಲಿ ಹೇಳಿರುವದು ಎಲ್ಲವೂ ಸತ್ಯವಲ್ಲ!
ಹಾವು ಕಚ್ಚಿದ ಸಂದರ್ಭದಲ್ಲಿ 108ಕ್ಕೆ ಕರೆ ಮಾಡುವುದು ಖಂಡಿತವಾಗಿಯೂ ಸರಿಯಾದ ಮತ್ತು ಜೀವ ಉಳಿಸುವ ಕ್ರಮ. ಆದರೆ 108 ಸಿಬ್ಬಂದಿ ಪ್ರತಿಯೊಂದು ಪ್ರಕರಣದಲ್ಲೂ ಮನೆಗೆ ಬಂದು ಆ್ಯಂಟಿ ಸ್ನೇಕ್ ವೆನಮ್ (ASV) ಇಂಜೆಕ್ಷನ್ ನೀಡುತ್ತಾರೆ ಎಂಬುದು ತಪ್ಪು ಕಲ್ಪನೆ.
ಭಾರತ ಸರ್ಕಾರದ ರಾಷ್ಟ್ರೀಯ ಆರೋಗ್ಯ ಮಿಷನ್ (NHM), ಹಾವು ಕಡಿತ ನಿರ್ವಹಣೆಗೆ ಸಂಬಂಧಿಸಿದ ರಾಷ್ಟ್ರೀಯ ಮಾರ್ಗಸೂಚಿಗಳು ಹಾಗೂ ವಿಶ್ವ ಆರೋಗ್ಯ ಸಂಸ್ಥೆ (WHO) ನೀಡಿರುವ ನಿರ್ದೇಶನಗಳ ಪ್ರಕಾರ, ಹಾವು ಕಡಿತಕ್ಕೆ ಬಳಸುವ ಆ್ಯಂಟಿ ಸ್ನೇಕ್ ವೆನಮ್ (ASV) ಔಷಧಿಯನ್ನು ಸಾಮಾನ್ಯವಾಗಿ ಆಸ್ಪತ್ರೆಯಲ್ಲಿಯೇ ವೈದ್ಯರ ಮೇಲ್ವಿಚಾರಣೆಯಲ್ಲಿ ನೀಡಲಾಗುತ್ತದೆ.
ಕೆಲವು ವಿಶೇಷ ಸಂದರ್ಭಗಳಲ್ಲಿ ಅಥವಾ ಕೆಲವು ರಾಜ್ಯಗಳ ನಿರ್ದಿಷ್ಟ ವ್ಯವಸ್ಥೆಗಳಲ್ಲಿ ಆಂಬುಲೆನ್ಸ್‌ನಲ್ಲಿಯೂ ASV ಲಭ್ಯವಿರಬಹುದು. ಆದರೆ ದೇಶದ ಎಲ್ಲ 108 ಆಂಬುಲೆನ್ಸ್‌ಗಳಲ್ಲಿ ಮನೆಗೆ ಬಂದು ASV ಇಂಜೆಕ್ಷನ್ ನೀಡಲಾಗುತ್ತದೆ ಎಂಬ ಹೇಳಿಕೆಗೆ ಯಾವುದೇ ಅಧಿಕೃತ ದೃಢೀಕರಣ ಇಲ್ಲ.
ಕಾರಣ, ಈ ಔಷಧಿ ಕೆಲವರಲ್ಲಿ ತೀವ್ರ ಅಲರ್ಜಿ (Anaphylaxis) ಸೇರಿದಂತೆ ಅಪಾಯಕಾರಿ ಪ್ರತಿಕ್ರಿಯೆಗಳನ್ನು ಉಂಟುಮಾಡುವ ಸಾಧ್ಯತೆ ಇರುವುದರಿಂದ ತುರ್ತು ಚಿಕಿತ್ಸೆ ಸೌಲಭ್ಯ ಇರುವ ಆಸ್ಪತ್ರೆಯಲ್ಲಿ ಮಾತ್ರ ಬಳಸುವುದು ಸುರಕ್ಷಿತ ಎಂದು ಮಾರ್ಗಸೂಚಿಗಳು ತಿಳಿಸುತ್ತವೆ.
108 ತುರ್ತು ವೈದ್ಯಕೀಯ ಸೇವೆಯ ಮುಖ್ಯ ಉದ್ದೇಶ ರೋಗಿಗೆ ಸ್ಥಳದಲ್ಲೇ ಅಗತ್ಯ ಪ್ರಾಥಮಿಕ ಚಿಕಿತ್ಸೆ ನೀಡಿ ಸಾಧ್ಯವಾದಷ್ಟು ಬೇಗ ಸೂಕ್ತ ಆಸ್ಪತ್ರೆಗೆ ತಲುಪಿಸುವುದು. ಕೆಲವು ರಾಜ್ಯಗಳಲ್ಲಿ ಅಥವಾ ವಿಶೇಷ ಯೋಜನೆಗಳ ಅಡಿಯಲ್ಲಿ ಕೆಲವು ಆಂಬುಲೆನ್ಸ್‌ಗಳಲ್ಲಿ ASV ಲಭ್ಯವಿರುವ ಉದಾಹರಣೆಗಳಿದ್ದರೂ, ದೇಶದ ಎಲ್ಲ 108 ಆಂಬುಲೆನ್ಸ್‌ಗಳಲ್ಲಿ ಈ ಔಷಧಿ ಇರುತ್ತದೆ ಅಥವಾ ಪ್ರತಿಯೊಬ್ಬ ರೋಗಿಗೂ ಮನೆ ಬಾಗಿಲಲ್ಲೇ ಇಂಜೆಕ್ಷನ್ ನೀಡಲಾಗುತ್ತದೆ ಎಂಬುದಕ್ಕೆ ಯಾವುದೇ ಅಧಿಕೃತ ರಾಷ್ಟ್ರೀಯ ನಿಯಮ ಅಥವಾ ದೃಢೀಕರಣ ಇಲ್ಲ.
ಹೀಗಾಗಿ ವೈರಲ್ ಸಂದೇಶದಲ್ಲಿರುವ ʻ108 ಆಂಬ್ಯುಲೆನ್ಸ್‌ನಲ್ಲಿ ಮನೆಗೆ ಬಂದು ಇಂಜೆಕ್ಷನ್ ಕೊಡುತ್ತಾರೆʼ ಎಂಬ ಭಾಗ ಪೂರ್ತಿ ಸತ್ಯವಲ್ಲ. ಹಾವು ಕಚ್ಚಿದರೆ ಗಾಬರಿಯಾಗದೆ ಕೂಡಲೇ 108ಕ್ಕೆ ಕರೆ ಮಾಡಬೇಕು, ಕಚ್ಚಿಸಿಕೊಂಡ ವ್ಯಕ್ತಿಯನ್ನು ಸಾಧ್ಯವಾದಷ್ಟು ಶಾಂತವಾಗಿರಿಸಿ, ಕಚ್ಚಿದ ಅಂಗವನ್ನು ಹೆಚ್ಚು ಅಲುಗಾಡಿಸದಂತೆ ನೋಡಿಕೊಳ್ಳಬೇಕು ಮತ್ತು ಆದಷ್ಟು ಬೇಗ ಹತ್ತಿರದ ಸರ್ಕಾರಿ ಅಥವಾ ಸೂಕ್ತ ಚಿಕಿತ್ಸಾ ಸೌಲಭ್ಯವಿರುವ ಆಸ್ಪತ್ರೆಗೆ ಸಾಗಿಸಬೇಕು.
ಗಾಯವನ್ನು ಕತ್ತರಿಸುವುದು, ವಿಷ ಹೀರುವ ಪ್ರಯತ್ನ ಮಾಡುವುದು, ಬಿಗಿಯಾಗಿ ಬಟ್ಟೆ ಕಟ್ಟುವುದು ಅಥವಾ ಮನೆಮದ್ದುಗಳನ್ನು ಬಳಸುವುದು ಅಪಾಯಕಾರಿ ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಎಲ್ಲಾ ಸಂದೇಶಗಳನ್ನೂ ಕುರುಡಾಗಿ ನಂಬುವುದನ್ನು ಬಿಡಿ! ನಿಮ್ಮ ವಾಟ್ಸಪ್‌ಗೆ ಬಂದ ಮೆಸೇಜ್‌ಗಳನ್ನು ಬೇರೆಯವರಿಗೆ ಫಾರ್ವರ್ಡ್ ಮಾಡುವ ಮುನ್ನ ನಿಮ್ಮ ತಲೆಗೂ ಸ್ವಲ್ಪ ಕೆಲಸ ಕೊಡಿ!