Friday, March 13, 2026
HomeCrimeಮ್ಯಾಟ್ರಿಮೋನಿ ಸೈಟ್‌ನ ISRO ನಕಲಿ ವಿಜ್ಞಾನಿ!

ಮ್ಯಾಟ್ರಿಮೋನಿ ಸೈಟ್‌ನ ISRO ನಕಲಿ ವಿಜ್ಞಾನಿ!

ಟೆಕ್ಕಿಗೆ 42.64 ಲಕ್ಷ ರೂ ಪಂಗನಾಮ

ಪುಣೆ: ಮಹಾರಾಷ್ಟ್ರದಲ್ಲಿ 28 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್‌ ಯುವತಿಗೆ ಮದುವೆ ಹೆಸರಿನಲ್ಲಿ ಭಾರಿ ವಂಚನೆ ನಡೆದ ಘಟನೆ ಬೆಳಕಿಗೆ ಬಂದಿದೆ. ಮ್ಯಾಟ್ರಿಮೋನಿ ವೆಬ್‌ಸೈಟ್‌ನಲ್ಲಿ ಪರಿಚಯವಾದ ವ್ಯಕ್ತಿಯೊಬ್ಬ ತಾನು ISROನಲ್ಲಿ ವಿಜ್ಞಾನಿಯಾಗಿ ಕೆಲಸ ಮಾಡುತ್ತೇನೆ ಎಂದು ನಂಬಿಸಿ, ಸುಮಾರು 42.64 ಲಕ್ಷ ರೂ ಹಣ ಪಡೆದು ವಂಚಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯನ್ನು ಅಲಿಬಾಗ್ ಮೂಲದ 36 ವರ್ಷದ ಜಯೇಶ್ ಪಾಟೀಲ್ ಎಂದು ಗುರುತಿಸಲಾಗಿದೆ. ಆತ ತನ್ನ ಗುರುತನ್ನು ಕಟ್ಟುಕಥೆ ರೂಪದಲ್ಲಿ ಹೇಳಿ ಮದುವೆಯಾಗುವುದಾಗಿ ಭರವಸೆ ನೀಡಿ ಮೂರು ತಿಂಗಳ ಅವಧಿಯಲ್ಲಿ ಹಣ ಪಡೆದುಕೊಂಡಿದ್ದಾನೆ ಎನ್ನಲಾಗಿದೆ.

ಪೊಲೀಸರ ಮಾಹಿತಿಯಂತೆ, ಯುವತಿ ಪ್ರಮುಖ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಮ್ಯಾಟ್ರಿಮೋನಿ ವೇದಿಕೆಯಲ್ಲಿ ವರನ ಹುಡುಕಾಟಕ್ಕಾಗಿ ಪ್ರೊಫೈಲ್ ರಚಿಸಿದ್ದರು. 2024ರ ನವೆಂಬರ್‌ನಲ್ಲಿ ಜಯೇಶ್ ಪಾಟೀಲ್ ಎಂಬ ಹೆಸರಿನಲ್ಲಿ ಸಂಪರ್ಕಿಸಿದ ವ್ಯಕ್ತಿ, ತಾನು ISROಗೆ ಸಂಬಂಧಪಟ್ಟ ವಿಜ್ಞಾನಿ ಎಂದು ಹೇಳಿ ಕೆಲವೇ ದಿನಗಳಲ್ಲಿ ಮದುವೆಯ ಪ್ರಸ್ತಾಪ ಮಾಡಿದ್ದಾನೆ. ನಂತರ ಆತ ಯುವತಿ ಇರುವ ಸ್ಥಳಕ್ಕೆ ಬಂದು ನೇರವಾಗಿ ಭೇಟಿಯಾಗಿದ್ದಾನೆ.

ಪರಿಚಯ ಮತ್ತು ವಿಶ್ವಾಸ ಹೆಚ್ಚಿದ ನಂತರ ವಿವಿಧ ಕಾರಣಗಳನ್ನು ಹೇಳಿ ಹಣ ಕೇಳಲು ಆರಂಭಿಸಿದ್ದಾನೆ. ಮದುವೆಯ ನಂತರ ತಮ್ಮ ಭವಿಷ್ಯಕ್ಕಾಗಿ ಜಮೀನು ಮತ್ತು ಆಸ್ತಿ ಖರೀದಿಸಲು ಹಣ ಬೇಕು ಎಂದು ಹೇಳಿ ಯುವತಿಯಿಂದ ಹಣ ಪಡೆದುಕೊಂಡಿದ್ದಾನೆ. 2024ರ ನವೆಂಬರ್‌ನಿಂದ 2025ರ ಜನವರಿ ವರೆಗೆ ಒಟ್ಟು 42.64 ಲಕ್ಷ ರೂ ಹಣವನ್ನು ಯುವತಿ ವರ್ಗಾಯಿಸಿದ್ದಾಳೆ.

ನಂತರ ಆತ ISROನಲ್ಲಿ ಕೆಲಸ ಮಾಡುತ್ತಿಲ್ಲ ಎಂಬುದು ತಿಳಿದುಬಂದಾಗ ಯುವತಿ ಆನ್‌ಲೈನ್ ಮೂಲಕ ಪೊಲೀಸ್‌ ದೂರು ಸಲ್ಲಿಸಿದರು. ತನಿಖೆ ಆರಂಭಿಸಿದ ಪೊಲೀಸರ ತಂಡ ಇದುವರೆಗೆ 16.65 ಲಕ್ಷ ರೂ ಹಣವನ್ನು ಫ್ರೀಜ್ ಮಾಡಿ ಮರುಪಡೆಯಲು ಸಾಧ್ಯವಾಗಿದೆ.

ತನಿಖೆಯಲ್ಲಿ ಆರೋಪಿಯ ನಿಜವಾದ ಹೆಸರು ಜಯೇಶ್ ಪಾಟೀಲ್ ಅಲಿಯಾಸ್ ಆದರ್ಶ್ ಮ್ಹಾತ್ರೆ ಎಂದು ಪತ್ತೆಯಾಗಿದೆ. ಆತ ಈಗಾಗಲೇ ಇದೇ ರೀತಿಯ ಮತ್ತೊಂದು ವಂಚನೆ ಪ್ರಕರಣದಲ್ಲಿ Navi Mumbai ಪೊಲೀಸರಿಂದ ಬಂಧಿತನಾಗಿದ್ದಾನೆ ಎಂದು ತಿಳಿದುಬಂದಿದೆ. ಮ್ಯಾಟ್ರಿಮೋನಿ ವೆಬ್‌ಸೈಟ್‌ಗಳಲ್ಲಿ ವಿದ್ಯಾವಂತರಾದ ಮಹಿಳೆಯರನ್ನು ಗುರಿಯಾಗಿಸಿಕೊಂಡು ಮದುವೆಯ ಭರವಸೆ ನೀಡಿ ಹಣ ಕಸಿದುಕೊಳ್ಳುತ್ತಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ.

ವಂಚನೆಯ ಮೂಲಕ ಪಡೆದ ಹಣವನ್ನು ಆತ ಐಷಾರಾಮಿ ಜೀವನಕ್ಕೆ ಬಳಸಿದ್ದು, ಗೋವಾದ ಕ್ಯಾಸಿನೊಗಳಿಗೆ ಭೇಟಿ ನೀಡಿದ್ದಾನೆ ಎನ್ನಲಾಗಿದೆ. ಸದ್ಯ ಆರೋಪಿ Navi Mumbai ಪೊಲೀಸರ ವಶದಲ್ಲಿದ್ದು, ತನಿಖೆ ಮುಂದುವರೆದಿದೆ.

ಸೋಷಿಯಲ್‌ ಮೀಡಿಯಾ, ಮ್ಯಾಟ್ರಿಮೋನಿ ಸೈಟ್‌ಗಳಲ್ಲಿ ಪರಿಚಯವಿಲ್ಲದವರನ್ನು ನಂಬುವ ಮುನ್ನ ಸಾವಿರ ಬಾರಿ ಯೋಚಿಸಿ

RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share