Friday, July 24, 2026
Join WhatsApp Group
HomeLocal Newsಜೀವ ಬೆದರಿಕೆಯೊಡ್ಡಿದವನ ಮೇಲೆ ಎಫ್‌ಐಆರ್

ಜೀವ ಬೆದರಿಕೆಯೊಡ್ಡಿದವನ ಮೇಲೆ ಎಫ್‌ಐಆರ್

ಯಲ್ಲಾಪುರ: ವ್ಯಕ್ತಿಯೊಬ್ಬರಿಗೆ ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ಪೊಲೀಸ್ ಠಾಣೆಯಲ್ಲಿ ಫಿರ್ಯಾದು ದಾಖಲಾಗಿದೆ. ಯಲ್ಲಾಪುರದ ರವೀಂದ್ರನಗರ, ಮುಂಡಗೋಡ ರಸ್ತೆಯ ನಿವಾಸಿಯಾಗಿರುವ ಕಾರ್ತಿಕ ನಾಗೇಶ ಭೋವಿವಡ್ಡರ (28) ಅವರು ಈ ಸಂಬಂಧ ಯಲ್ಲಾಪುರ ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಿದ್ದಾರೆ.

ಫೆಬ್ರವರಿ 28ರಂದು ಅವರು ಶಿರಸಿಯ ಜಾತ್ರೆಗೆ ಹೋಗಿದ್ದು, ರಾತ್ರಿ ಸುಮಾರು 1 ಗಂಟೆ ಸುಮಾರಿಗೆ ಯಲ್ಲಾಪುರಕ್ಕೆ ವಾಪಸ್ ಬರುತ್ತಿದ್ದರು. ಆ ಸಂದರ್ಭದಲ್ಲಿ ಮುಂಡಗೋಡ ರಸ್ತೆಯಲ್ಲಿರುವ ಶ್ರೀ ಆಂಜನೇಯ ದೇವಸ್ಥಾನದ ಎದುರು ಬಂದಾಗ ಸ್ಥಳೀಯ ನಿವಾಸಿಯಾಗಿರುವ ತಮ್ಮ ಪರಿಚಿತ ಅಬ್ದುಲ್ ಎಂಬ ವ್ಯಕ್ತಿ ದ್ವಿಚಕ್ರ ವಾಹನದಲ್ಲಿ ಬಂದು ಅವರನ್ನು ಮಾತನಾಡಿಸಿದ್ದಾನೆ.

ಆ ವೇಳೆ ಅಬ್ದುಲ್, ಅದೇ ದಿನ ನಡೆದಿದ್ದ ಪ್ರೆಸ್ ಮೀಟ್ ಕುರಿತು ಪ್ರಶ್ನಿಸಿ, “ಸೋಮೇಶ್ವರ ನಾಯ್ಕ ಏನು ಮಾತನಾಡಿದರು?” ಎಂದು ಕೇಳಿದ್ದಾನೆ. ಅಲ್ಲದೆ, “ವಿಶಾಲ ವಾಳಂಬಿ ಸುದ್ದಿಗೆ ಸೋಮೇಶ್ವರ ನಾಯ್ಕ ಹೋದರೆ ಅವನನ್ನು ಕೊಂದು ಹಾಕುವುದು ಗ್ಯಾರಂಟಿ” ಎಂದು ಹೇಳಿ, ಈ ಮಾತನ್ನು ಸೋಮೇಶ್ವರ ನಾಯ್ಕ ಅವರಿಗೆ ಹೋಗಿ ತಿಳಿಸಬೇಕು ಎಂದು ಹೇಳಿದ್ದಾನೆ ಎಂದೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ನಂತರ ಅಬ್ದುಲ್, ಕಾರ್ತಿಕ ಮತ್ತು ಅವರ ಜೊತೆಗಿದ್ದ ನಿಖಿಲ್ ಅವರನ್ನು ತನ್ನ ದ್ವಿಚಕ್ರ ವಾಹನದಲ್ಲಿ ಪೇಟೆಗೆ ಕರೆದುಕೊಂಡು ಹೋಗಿ, ಮನೆಗೆ ಬಿಡುತ್ತೇನೆ ಎಂದು ಹೇಳಿ ಕರೆದುಕೊಂಡು ಹೋಗಿದ್ದಾನೆ. ಬಳಿಕ ರವೀಂದ್ರನಗರ ಕಡೆಗೆ ವಾಪಸ್ ಬರುತ್ತಿರುವಾಗ ಮಾರ್ಗ ಮಧ್ಯೆ ಸೋಮೇಶ್ವರ ನಾಯ್ಕ ಅವರ ಮನೆಯ ಹತ್ತಿರ ವಾಹನ ನಿಲ್ಲಿಸಿ, ಅಲ್ಲಿ ಮನೆಯ ಎದುರು ನಿಲ್ಲಿಸಿದ್ದ ದ್ವಿಚಕ್ರ ವಾಹನವನ್ನು ನೋಡಿ “ಇಂದು ಸೋಮು ಬೈಕ್ ಸುಟ್ಟು ಹಾಕುತ್ತೇನೆ” ಎಂದು ಹೇಳಿದ್ದಾನೆ.

ಅಬ್ದುಲ್ ತನ್ನ ದ್ವಿಚಕ್ರ ವಾಹನವನ್ನು ಆ ಬೈಕ್ ಹತ್ತಿರ ತೆಗೆದುಕೊಂಡು ಹೋಗಿ ಬಾಯಲ್ಲಿದ್ದ ಪಾನ್ ಉಗುಳನ್ನು ಸೋಮೇಶ್ವರ ನಾಯ್ಕ ಅವರ ಬೈಕ್‌ ಮೇಲೆ ಉಗುಳಿ, ಕಾರ್ತಿಕ ಅವರ ಬಳಿ “ಈ ವಿಷಯ ಯಾರಿಗೂ ಹೇಳಬೇಡ. ಹೇಳಿದರೆ ನಿನಗೂ ಮತ್ತು ಸೋಮೇಶ್ವರ ನಾಯ್ಕನಿಗೂ ಕೊಂದು ಹಾಕುತ್ತೇನೆ” ಎಂದು ಜೀವ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಈ ಘಟನೆ ಬಳಿಕ ಕಾರ್ತಿಕ ಅವರು ಅಬ್ದುಲ್ ವಿರುದ್ಧ ಯಲ್ಲಾಪುರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ಆರೋಪಿಯನ್ನು ಠಾಣೆಗೆ ಕರೆಸಿ, ವಿಚಾರಣೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಹಾಗೂ ತಮ್ಮ ಜೀವ ಭದ್ರತೆಗೆ ಸೂಕ್ತ ರಕ್ಷಣೆ ಒದಗಿಸುವಂತೆ ಮನವಿ ಮಾಡಿದ್ದಾರೆ. ಈ ಸಂಬಂಧ ಪೊಲೀಸರು ನ್ಯಾಯಾಲಯದ ಅನುಮತಿಯೊಂದಿಗೆ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share