ಬೆಂಗಳೂರು/ಕಾರವಾರ: ರಾಜ್ಯದ 2026–27ನೇ ಸಾಲಿನ ಬಜೆಟ್‌ನಲ್ಲಿ ಮುಖ್ಯಮಂತ್ರಿ Siddaramaiah ಅವರು ಉತ್ತರ ಕನ್ನಡ ಜಿಲ್ಲೆಯ ಜನರ ಬಹು ವರ್ಷದ ಕನಸಾಗಿದ್ದ ಮಹತ್ವದ ಘೋಷಣೆಯನ್ನು ಮಾಡಿದ್ದಾರೆ. ಕಾರವಾರದಲ್ಲಿ ಸುಮಾರು 100 ಕೋಟಿ ರೂ ವೆಚ್ಚದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಮಂಜೂರಾತಿ ನೀಡಲಾಗಿದೆ.
ಕಳೆದ ಫೆಬ್ರವರಿ 22ರಂದು ಕಾರವಾರ ನಗರದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಉದ್ಘಾಟನೆಗೆ ಆಗಮಿಸಿದ್ದ ವೇಳೆ, ಈ ಬಾರಿಯ ಬಜೆಟ್‌ನಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಘೋಷಣೆ ಮಾಡುವ ಭರವಸೆ ನೀಡಿದ್ದ ಸಿಎಂ ಸಿದ್ದರಾಮಯ್ಯ, ಇದೀಗ ನುಡಿದಂತೆ ನಡೆದು ಬಜೆಟ್‌ನಲ್ಲಿ ಯೋಜನೆಗೆ ಅಧಿಕೃತ ಅನುಮೋದನೆ ನೀಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ಉನ್ನತ ಮಟ್ಟದ ಆರೋಗ್ಯ ಸೌಲಭ್ಯಗಳ ಕೊರತೆ ಕುರಿತು ಹಲವು ವರ್ಷಗಳಿಂದ ಸಾರ್ವಜನಿಕರು, ವಿವಿಧ ಸಂಘಟನೆಗಳು ಹಾಗೂ ಆರೋಗ್ಯ ಹೋರಾಟಗಾರರು ನಿರಂತರವಾಗಿ ಹೋರಾಟ ನಡೆಸುತ್ತಿದ್ದರು. ಪ್ರತಿ ಚುನಾವಣೆಯ ಸಂದರ್ಭದಲ್ಲೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣದ ಭರವಸೆ ಕೇಳಿಬರುತ್ತಿದ್ದರೂ, ಅದು ಚುನಾವಣೆ ಮುಗಿದ ಬಳಿಕ ಮರೆತು ಹೋಗುವ ಪರಿಸ್ಥಿತಿ ಉಂಟಾಗುತ್ತಿತ್ತು.
ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಿರ್ಜಾನ ಪ್ರದೇಶದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಸ್ಥಳ ಪರಿಶೀಲನೆಯೂ ನಡೆದಿತ್ತು. ಆದರೆ ಆರ್ಥಿಕ ಇಲಾಖೆಯಿಂದ ಅಗತ್ಯವಿರುವ ಅನುದಾನ ದೊರೆಯದೆ ಯೋಜನೆ ಮುಂದುವರಿಯದೆ, ಜಿಲ್ಲೆಯ ಜನರ ಬಹುಕಾಲದ ಕನಸು ನೆರವೇರದೆ ಉಳಿದಿತ್ತು.
ಇದೀಗ ಬಜೆಟ್‌ನಲ್ಲಿ ಅಧಿಕೃತ ಘೋಷಣೆ ಆಗಿರುವುದರಿಂದ ಜಿಲ್ಲೆಯ ಜನರಲ್ಲಿ ಸಂತಸ ವ್ಯಕ್ತವಾಗಿದೆ. ಹಲವು ವರ್ಷಗಳಿಂದ ಸಾರ್ವಜನಿಕರು ಹಾಗೂ ವಿವಿಧ ಸಂಘಟನೆಗಳು ನಡೆಸಿದ ಹೋರಾಟಕ್ಕೆ ಕೊನೆಗೂ ಫಲ ಸಿಕ್ಕಂತಾಗಿದೆ. ಕಾರವಾರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣವಾದರೆ ಉತ್ತರ ಕನ್ನಡ ಜಿಲ್ಲೆಯ ಜನರಿಗೆ ಉನ್ನತ ಮಟ್ಟದ ಚಿಕಿತ್ಸಾ ಸೌಲಭ್ಯಗಳು ಸ್ಥಳೀಯವಾಗಿಯೇ ದೊರೆಯಲಿದ್ದು, ಮಂಗಳೂರು ಅಥವಾ ಹುಬ್ಬಳ್ಳಿ ಮುಂತಾದ ದೂರದ ನಗರಗಳಿಗೆ ತೆರಳುವ ಅಗತ್ಯವೂ ಕಡಿಮೆಯಾಗಲಿದೆ.