Friday, July 24, 2026
Join WhatsApp Group
HomeLocal Newsಬಜೆಟ್:‌ ಉತ್ತರಕನ್ನಡಿಗರ ಕಿವಿಗೆ ಹೂವು!

ಬಜೆಟ್:‌ ಉತ್ತರಕನ್ನಡಿಗರ ಕಿವಿಗೆ ಹೂವು!

ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅನಂತಮೂರ್ತಿ ಹೆಗಡೆ ವಾಗ್ದಾಳಿ

​ಶಿರಸಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ ಬಜೆಟ್ ಉತ್ತರ ಕನ್ನಡ ಜಿಲ್ಲೆಯ ಪಾಲಿಗೆ ಕೇವಲ ಬೋಗಸ್ ಆಗಿದ್ದು, ಇದು ಜನರ ಕಣ್ಣೊರೆಸುವ ತಂತ್ರ ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅನಂತಮೂರ್ತಿ ಹೆಗಡೆ ತೀವ್ರವಾಗಿ ಟೀಕಿಸಿದ್ದಾರೆ.

​ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಘೋಷಿಸಿರುವುದು ಕೇವಲ 100 ಕೋಟಿ ರೂಪಾಯಿಗಳಲ್ಲಿ. ಇಂದು ಒಂದು ಸುಸಜ್ಜಿತ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೇ 10ರಿಂದ 20 ಕೋಟಿ ಬೇಕು ಎಂದಿರುವಾಗ, ನೂರು ಕೋಟಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಲು ಸಾಧ್ಯವೇ? ಇದರಲ್ಲಿ ಎಷ್ಟು ಬೆಡ್‌ಗಳಿವೆ, ಕಾರ್ಡಿಯಾಲಜಿ ಅಥವಾ ನೆಫ್ರಾಲಜಿ ವಿಭಾಗಗಳಿವೆಯೇ, ಎಷ್ಟು ಹಾಸಿಗೆ ಎಂಬ ಯಾವ ಸ್ಪಷ್ಟನೆಯೂ ಇಲ್ಲ.

ಸುಮಾರು 400 ಕೋಟಿ ರೂಪಾಯಿ ಬೇಕಾಗುವ ಇಂತಹ ಯೋಜನೆಗೆ ಇಷ್ಟು ಕಡಿಮೆ ಹಣ ಮೀಸಲಿಟ್ಟಿರುವುದು ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಾಗಿ ಮಾಡುತ್ತಿರುವ ಗಿಮಿಕ್ ಅಷ್ಟೇ ಎಂದು ಕಿಡಿಕಾರಿದ್ದಾರೆ.

ಕಾರವಾರದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಕ್ರೆಡಿಟ್ ಪಡೆಯಲು ಕಾಂಗ್ರೆಸ್ ಸರ್ಕಾರ ಹವಣಿಸುತ್ತಿದೆ. ಆದರೆ, ಈ ಕಟ್ಟಡವು ಮಾಜಿ ಶಾಸಕಿ ರೂಪಾಲಿ ನಾಯ್ಕ್ ಅವರ ವಿಶೇಷ ಪ್ರಯತ್ನ ಹಾಗೂ 2021ರ ಯಡಿಯೂರಪ್ಪ ಸರ್ಕಾರದ ಅವಧಿಯಲ್ಲಿ ಮಂಜೂರಾದ 166 ಕೋಟಿ ರೂ. ಅನುದಾನದಿಂದ ನಿರ್ಮಾಣಗೊಂಡಿದೆ. ಕೇಂದ್ರ ಸರ್ಕಾರ ಕೂಡ ಇದಕ್ಕೆ 16 ಕೋಟಿ ರೂ. ನೀಡಿದೆ. ಸಿದ್ಧವಾದ ಕಟ್ಟಡವನ್ನು ಉದ್ಘಾಟಿಸಿ ನಾವು ಮಾಡಿದ್ದು ಎನ್ನುವುದು ಕಾಂಗ್ರೆಸ್‌ನ ನಾಟಕೀಯ ನಡೆಯಾಗಿದೆ.

ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್‌ ಉದ್ಘಾಟಿಸಿ ತಮ್ಮದೇ ಸಾಧನೆ ಎನ್ನುವಂತೆ ಬಿಂಬಿಸಿದ್ದಾರೆ. ಈಗ ಸುಪರ್‌ ಸ್ಪೆಷಾಲಿಟಿ ಆಸ್ಪತ್ರೆಗೆ 100 ಕೋಟಿ ರೂ. ಅನುದಾನ ನೀಡುವುದಾಗಿ ಹೇಳುವ ಮೂಲಕ ಜನರ ಕಣ್ಣಿಗೆ ಮಣ್ಣೆರೆಚುವ ತಂತ್ರ ಮಾಡಿದ್ದಾರೆ. ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ದೃಷ್ಟಿಯಿಂದ ಘೋಷಣೆ ಮಾಡಲಾದ ಚುನಾವಣಾ ಗಿಮಿಕ್‌ ಎಂದು ದೂರಿದ್ದಾರೆ.

ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಪ್ರಯತ್ನದಿಂದ ಶಿರಸಿಯಲ್ಲಿ 142 ಕೋಟಿ ರೂ. ವೆಚ್ಚದ ಆಸ್ಪತ್ರೆ ಕಾಮಗಾರಿ ಶೇ. 80ರಷ್ಟು ಮುಗಿದಿದ್ದರೂ, ಕಳೆದ ಒಂದೂವರೆ ವರ್ಷ ಕಳೆದರೂ ಸರ್ಕಾರ ಈವರೆಗೆ ವೈದ್ಯರ ನೇಮಕಾತಿ ಮಾಡಿಲ್ಲ. ವೈದ್ಯಕೀಯ ಉಪಕರಣಗಳಿಗಾಗಿ ಇಟ್ಟಿದ್ದ 30 ಕೋಟಿ ಹಣವನ್ನು 5 ಕೋಟಿಗೆ ಇಳಿಸುವ ಮೂಲಕ ಎಂಆರ್‌ಐ ಮತ್ತು ಸಿಟಿ ಸ್ಕ್ಯಾನ್ ಸೌಲಭ್ಯಗಳನ್ನು ಕಿತ್ತುಕೊಳ್ಳಲಾಗಿದೆ. ಬಜೆಟ್‌ ನಲ್ಲಿ ಶಿರಸಿ ಆಸ್ಪತ್ರೆಗೂ ಯಾವುದೇ ಅನುದಾನ ಘೋಷಣೆ ಮಾಡಲಾಗಿಲ್ಲ.

ಈ ಹಿಂದೆ ಬಿಜೆಪಿ ಸರಕಾರದ ಅವಧಿಯಲ್ಲಿ ಕುಮಟಾದಲ್ಲಿ ಘೋಷಣೆಯಾದ ಆಸ್ಪತ್ರೆಗೆ ಹಣ ನೀಡದೆ, ಹೊಸದಾಗಿ ಆಸ್ಪತ್ರೆ ಮಾಡುತ್ತೇವೆ ಎನ್ನುವುದು ಜನರನ್ನು ಮರಳು ಮಾಡುವ ಟೋಪಿ ಹಾಕುವ ಬಜೆಟ್ ಆಗಿದೆ ಎಂದು ಅನಂತಮೂರ್ತಿ ಹೆಗಡೆ ಆಕ್ರೋಶ ವ್ಯಕ್ತಪಡಿಸಿದರು.

ಅಡಿಕೆಯ ಎಲೆ ಚುಕ್ಕಿ ರೋಗ, ಹಳದಿ ಎಲೆ ರೋಗ, ಹಾಗೂ ಕೋಳೆ ರೋಗಗಳ ನಿಯಂತ್ರಣಕ್ಕೆ ಹೆಚ್ಚಿನ ಒತ್ತು ಎಂದಷ್ಟೇ ಹೇಳಲಾಗಿದೆ. ತೆಂಗಿನ ಬೆಳೆಗೆ ಮಾರಕವಾಗಿರುವ ಕಪ್ಪು ತಲೆ ಹೂಳು ಮತ್ತು ಬಿಳಿ ನೊಣಗಳ ಹಾವಳಿಯನ್ನು ತಡೆಗಟ್ಟಲು ಎಲ್ಲವೂ ಸೇರಿ 10 ಕೋಟಿ ರೂ ವೆಚ್ಚದ ಸಮುದಾಯ ಆಧಾರಿತ ಕಾರ್ಯಕ್ರಮವನ್ನು ರೂಪಿಸಲಾಗಿದೆ ಎಂದು ಬಜೆಟ್‌ನಲ್ಲಿ ಹೇಳಲಾಗಿದೆ. ಆದರೆ ಕೃಷಿ ವಲಯಕ್ಕೆ ಕೊಟ್ಟಂತೆ ತೋರಿಸಿ ಏನೂ ನೀಡಿಲ್ಲ ಎಂದು ಆರೋಪಿಸಿದ್ದಾರೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share