Friday, July 24, 2026
Join WhatsApp Group
HomeLocal Newsಸಂಸ್ಥೆಯ ಉನ್ನತಿಗೆ ಸಿಬ್ಬಂದಿಗಳೇ ಕಾರಣ

ಸಂಸ್ಥೆಯ ಉನ್ನತಿಗೆ ಸಿಬ್ಬಂದಿಗಳೇ ಕಾರಣ

ಕಾರವಾರ- ಬೆಂಗಳೂರು ನೂತನ ಪಲ್ಲಕ್ಕಿ ಬಸ್ ಸಂಚಾರಕ್ಕೆ ಶಾಸಕ ಸೈಲ್ ಚಾಲನೆ

ಕಾರವಾರ : ಜನತೆಯ ಬಹು ದಿನಗಳ ನಿರೀಕ್ಷೆಯಂತೆ ಬೆಂಗಳೂರಿಗೆ ಸುಸಜ್ಜಿತ ಸರ್ಕಾರಿ ಬಸ್ ಸೌಲಭ್ಯವನ್ನು ಒದಗಿಸಲಾಗಿದ್ದು, ಇನ್ನು 2 ಹೆಚ್ಚುವರಿ ಪಲ್ಲಕ್ಕಿ ಬಸ್ ಗಳನ್ನು ಮತ್ತು ಮಲ್ಟಿ ಆಕ್ಷೆಲ್ ವೋಲ್ವೋ ಬಸ್ ಸೌಲಭ್ಯವನ್ನು ಒದಗಿಸಲಾಗುವುದು ಎಂದು MCA ಅಧ್ಯಕ್ಷರು ಹಾಗೂ ಶಾಸಕ ಸತೀಶ್ ಸೈಲ್ ಹೇಳಿದರು.

ಕಾರವಾರದಿಂದ ಬೆಂಗಳೂರಿಗೆ ತೆರಳುವ ನೂತನ ಪಲ್ಲಕ್ಕಿ ಬಸ್ ಗಳಿಗೆ ಕಾರವಾರ ಬಸ್ ನಿಲ್ದಾಣದಲ್ಲಿ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.

ಇತ್ತೀಚೆಗಷ್ಟೇ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ಉದ್ಘಾಟಿಸಿದ ನೂತನ ಸೇತುವೆಯ ಮುಖಾಂತರ ಈ ಬಸ್ ಸಂಚರಿಸಲಿದೆ. ಈ ನೂತನ ಬಸ್ ಸೌಕರ್ಯವನ್ನು ಒದಗಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸರ್ಕಾರದ ಪರವಾಗಿ ಶಾಸಕ ಸತೀಶ್ ಸೈಲ್ ಇದೇ ಸಂದರ್ಭದಲ್ಲಿ ಧನ್ಯವಾದಗಳನ್ನು ಅರ್ಪಿಸಿದರು.

ಶಕ್ತಿ ಯೋಜನೆಯು ಸಾರಿಗೆ ಸಂಸ್ಥೆಗೆ ಆರ್ಥಿಕ ಶಕ್ತಿ ಒದಗಿಸಿದ್ದು, ಈ ವರ್ಷ ವಾಯವ್ಯ ಕರ್ನಾಟಕ ಸಾರಿಗೆಯ ಉತ್ತರ ಕನ್ನಡ ವಿಭಾಗಕ್ಕೆ 13 ಕೋಟಿ ರೂ ಲಾಭವಾಗಿದೆ.‌ ಇದಕ್ಕೆ ಸಂಸ್ಥೆಯ ಚಾಲಕ‌-ನಿರ್ವಾಹಕರು ಮುಖ್ಯ ಕಾರಣ ಎಂದರು.

ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದಾದ ‘ಶಕ್ತಿ ಯೋಜನೆ’ಯ ಕುರಿತು ಮಾತನಾಡಿದ ಶಾಸಕರು, ಸಾರಿಗೆ ಸಂಸ್ಥೆಗಳು ನಷ್ಟದಲ್ಲಿವೆ ಎಂಬ ಆರೋಪಗಳನ್ನು ಸಾರಾಸಗಟಾಗಿ ತಳ್ಳಿಹಾಕಿದರು. ಶಕ್ತಿ ಯೋಜನೆಯಿಂದ ಸಾರಿಗೆ ಇಲಾಖೆ ನಷ್ಟದಲ್ಲಿದೆ ಎಂದು ಹಲವರು ಹೇಳುತ್ತಿದ್ದರು. ಆದರೆ ನಮ್ಮ ಶಿರಸಿ ವಿಭಾಗವು ಈ ವರ್ಷ ಬರೋಬ್ಬರಿ 13 ಕೋಟಿ ರೂಪಾಯಿಗಳ ಲಾಭವನ್ನು ಗಳಿಸಿದೆ. ಈ ಸಾಧನೆಗೆ ಶ್ರಮವಹಿಸಿ ಕೆಲಸ ಮಾಡಿದ ವಿಭಾಗೀಯ ಅಧಿಕಾರಿಗಳು (ಡಿಸಿ), ಮ್ಯಾನೇಜರ್ ಹಾಗೂ ವಿಶೇಷವಾಗಿ ಚಾಲಕರು ಮತ್ತು ನಿರ್ವಾಹಕರು (ಕಂಡಕ್ಟರ್) ಕಾರಣೀಕರ್ತರು ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಅಧಿಕಾರಿಗಳು ಅಥವಾ ಆರ್ಥಿಕವಾಗಿ ಸಬಲರಾಗಿರುವ ಮಹಿಳೆಯರು ಇಚ್ಛಿಸಿದರೆ ಸ್ವಯಂಪ್ರೇರಿತರಾಗಿ ಟಿಕೆಟ್ ಖರೀದಿಸಿ ಪ್ರಯಾಣಿಸಬಹುದು. ಇದಕ್ಕೆ ಯಾವುದೇ ನಿರ್ಬಂಧವಿಲ್ಲ, ಆರ್ಥಿಕವಾಗಿ ಶಕ್ತರಾದವರು ಟಿಕೆಟ್ ಪಡೆದು ಹೋಗಲು ಮುಕ್ತ ಅವಕಾಶವಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆ ತಾಲೂಕು ಅಧ್ಯಕ್ಷ ರಾಜೇಂದ್ರ ರಾಣೆ, ಡಿಪೋ ಮೆನೇಜರ್ ಸೌಮ್ಯ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share